ಡೈಲಿ ವಾರ್ತೆ: 20/ಜುಲೈ /2024

ಕಾರ್ಕಡ ಬಡಾಹೋಳಿಯ ಕೃಷಿ ಭೂಮಿ ಮತ್ತು ಮನೆಗಳು ಜಲಾವೃತ – ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಗ್ರಾಮಸ್ಥರು, ರೈತರ ಪ್ರತಿಭಟನೆ

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ ಬಡಾಹೋಳಿ ಪರಿಸರದ ನೆರೆ ಪೀಡಿತ ಪ್ರದೇಶಗಳ ನೆರೆ ಸಂತ್ರಸ್ತರು ಶನಿವಾರ ಬಡಾ ಹೋಳಿಯಲ್ಲಿ ಸಂಬಂಧಿತ ಇಲಾಖೆಗಳ ನಿಷ್ಕ್ರಿಯತೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ, ಸಾಲಿಗ್ರಾಮ ಪುರಸಭಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನೆರೆ ಪೀಡಿತ ಪ್ರದೇಶಗಳ ಸಂತೃಸ್ತರು ಬಹು ಸಂಖ್ಯೆಯಲ್ಲಿ ನೆರೆದಿದ್ದು, ಅಧಿಕಾರಿಗಳು ಮತ್ತು ಮಾಧ್ಯಮದವರಿಗೆ ತಮ್ಮ ಸಂಕಷ್ಟಗಳನ್ನು ವಿವರಿಸಿದರು.

ರಮೇಶ್ ಮೆಂಡನ್ ಮಾತನಾಡಿ, ಕಾರ್ಕಡ ಬಡಾಹೋಳಿಯ ಕೃಷಿ ಭೂಮಿ ಮತ್ತು ಮನೆಗಳು ಪ್ರತಿ ಮಳೆಗಾಲದಲ್ಲಿ ಸಣ್ಣ ಮಳೆಗೂ ಜಲಾವೃತ್ತವಾಗುತ್ತಿವೆ. ಈ ಬಾರಿ ಸುಮಾರು 20 ಕ್ಕೂ ಹೆಚ್ಚು ಮನೆಗಳು ಜಲಾವೃತ್ತವಾಗಿದ್ದು, ನೂರು ಎಕ್ರೆ ಕೃಷಿ ಪ್ರದೇಶ ನಾಶವಾಗಿದೆ. ಅದರಲ್ಲಿ ಚಿತ್ರಪಾಡಿ ವ್ಯಾಪ್ತಿಯ 60 ಎಕ್ರೆ ಕೃಷಿ ಭೂಮಿ ಇನ್ನೂ ಕೂಡ ನಾಟಿ ಮಾಡಿಲ್ಲ. ಎಲ್ಲೆಡೆ ನೆರೆ ನೀರೇ ತುಂಬಿಕೊಂಡಿದೆ. ಈ ಭಾಗದಲ್ಲಿ ಹಿರೇ ಹೊಳೆ ಎನ್ನುವ ಹೊಳೆಯಲ್ಲಿ ಹೂಳು ತುಂಬಿದ್ದೇ ಈ ಸಮಸ್ಯೆಗೆ ಕಾರಣ. ಚಿತ್ರಪಾಡಿಯಿಂದ ಹೋಗುವ ಹೊಳೆ ನೀರು ಸರಾಗವಾಗಿ ಹರಿಯಲು ಅಲ್ಲಲ್ಲಿ ಇರುವ ದಿಬ್ಬಗಳು ತಡೆಯಾಗಿವೆ. ಸುಮಾರು 12 ವರ್ಷದ ಹಿಂದೆ ಒಮ್ಮೆ ಹೂಳು ತೆಗೆದ ಪರಿಣಾಮ ಸುಮಾರು ಐದು ವರ್ಷಗಳ ಕಾಲ ಯಾವುದೇ ನೆರೆ ಸಮಸ್ಯೆ ಇರಲಿಲ್ಲ. ಇದೀಗ ಐದಾರು ವರ್ಷದಿಂದ ಮತ್ತೆ ನೆರೆ ಸಮಸ್ಯೆ ಉಂಟಾಗಿದೆ. ಉಡುಪಿ ಜಿಲ್ಲಾಧಿಕಾರಿಗಳು ಈ ಕಡೆ ಗಮನ ಹರಿಸಬೇಕು. ಸಾಲಿಗ್ರಾಮ ಪಟ್ಟಣ ಪಂಚಾಯತ್ ನವರು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಸ್ಥಳೀಯ ಕೃಷಿಕ ಪರಮೇಶ್ವರ ಭಟ್ ತಮ್ಮ ಗೊಳಿನ ಕತೆಯನ್ನು ವಿವರಿಸಿ, ಜುಲೈ 4 ರಿಂದ ತುಂಬಿದ ನೆರೆ ನೀರು ಇಂದಿಗೂ ಇಳಿಯಲಿಲ್ಲ. ಮಳೆ ಸುರಿಯುತ್ತಲೇ ಇದ್ದು, ಸದ್ಯ ನೆರೆ ಇಳಿಯುವ ಲಕ್ಷಣವೂ ಕಾಣುತ್ತಿಲ್ಲ. ಕೃಷಿ ಕಾರ್ಯ ನಡೆಸಲು ಅಡಚಣೆ ಉಂಟಾಗಿರುವುದಲ್ಲದೆ ಮನೆ, ಕಟ್ಟಡಗಳನ್ನು ರಕ್ಷಿಸುವುದೂ ಕಷ್ಟವಾಗಿದೆ. ಯಾವ ಹೊತ್ತಿಗೆ ಏನು ಸಂಭವಿಸುವುದೋ ಎಂಬ ಆತಂಕ ಉಂಟಾಗಿದೆ ಎಂದರು.

ಸ್ಥಳಕ್ಕೆ ಬಂದಿದ್ದ ಸಾಲಿಗ್ರಾಮ ಪುರಸಭೆಯ ಮುಖ್ಯಾಧಿಕಾರಿ ಶಿವ ನಾಯಕ್, ಗ್ರಾಮ ಲೆಕ್ಕಾಧಿಕಾರಿ ಹರೀಶ್ ಮತ್ತು ರವಿಯವರಿಗೆ ನೆರೆ ಪೀಡಿತರು ತಮ್ಮ ಸಮಸ್ಯೆಗಳನ್ನು ವಿವರಿಸಿ, ಶೀಘ್ರ ಸಮಸ್ಯೆ ಪರಿಹರಿಸುವಂತೆ ಮನವಿ ಸಲ್ಲಿಸಿದರು. ಮುಂಜಾಗ್ರತ ಕ್ರಮವಾಗಿ ಕೋಟ ಪಿ ಎಸ್ಐ ಸುಧಾ ಪ್ರಭು, ಹಾಗೂ ಸಿಬ್ಬಂದಿಗಳುಗಳು ಸ್ಥಳದಲ್ಲಿದ್ದರು.

ಪ್ರತಿಭಟನೆಯಲ್ಲಿ ನೆರೆ ಸಂತೃಸ್ತರಾದ ರಮೇಶ್ ಮೆಂಡನ್, ಉಮೇಶ್ ಹೆಬ್ಬಾರ್, ಕೇಶವ ನಾಯರಿ, ಪರಮೇಶ್ವರ ಭಟ್, ಅಚ್ಯುತ ಪೂಜಾರಿ, ಶಿವರಾಮ ಕಾರಂತ, ಶ್ರೀನಿವಾಸ ಕಾರಂತ, ಕೃಷ್ಣ ಬಡಾಹೋಳಿ, ಗಣೇಶ್ ಕೆ., ನಂದಿತಾ ಐತಾಳ, ರಾಜಾ, ಚಂದ್ರ, ಗೋಪಿ ಮರಕಾಲ, ಪದ್ದು, ಕಮಲ, ವಿಜಯ ನಾಯರಿ, ಅರುಣ್, ಸತ್ಯ, ಮಂಜು ಇನ್ನಿತರರು ಇದ್ದರು. ಮನವಿ ಸಲ್ಲಿಸುವ ಮುನ್ನ ನೆರೆ ನೀರು ತುಂಬಿದ್ದ ಪ್ರದೇಶಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮನವಿ ಸ್ವೀಕರಿಸಿದ ಅಧಿಕಾರಿಗಳು, ಪರಿಸರದ ಜನರ ಸಂಕಷ್ಟಗಳ ಅರಿವಾಗಿದೆ, ಶೀಘ್ರ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರು.