ಡೈಲಿ ವಾರ್ತೆ: 14/ಅ./2025

ಕೊಣಾಜೆ| ಸರ ಕಳ್ಳತನ ಆರೋಪಿ ನಿಗೂಢ ಸಾವು – ಮುದುಂಗಾರುಕಟ್ಟೆ ಬಸ್‌ ನಿಲ್ದಾಣ ಬಳಿ ಯುವಕನ ಮೃತದೇಹ ಪತ್ತೆ!

ಕೊಣಾಜೆ: ಬಾಳೆಪುಣಿ ಗ್ರಾಮದ ಮುದುಂಗಾರುಕಟ್ಟೆ
ಬಸ್ ತಂಗುದಾಣದಲ್ಲಿ ಕೊಣಾಜೆ ಠಾಣೆಯ ಸರಕಳ್ಳತನದ ಆರೋಪಿ ಯುವಕನ ಮೃತದೇಹ ಪತ್ತೆಯಾಗಿದ್ದು, ಮಾದಕ ಪದಾರ್ಥ ವ್ಯಸನದಿಂದ ಸಾವನ್ನಪ್ಪಿರುವ ಬಗ್ಗೆ ಶಂಕಿಸಲಾಗಿದೆ.

ಮುದುಂಗಾರುಕಟ್ಟೆ ಬಳಿಯ ಪಾತೂರು ನಿವಾಸಿ ಮಹಮ್ಮದ್ ನಿಯಾಫ್ (28) ಸಾವನ್ನಪ್ಪಿರುವ ಯುವಕ.

ಇಂದು ಮಧ್ಯಾಹ್ನ ವ್ಯಕ್ತಿಯೋರ್ವರು ತಮ್ಮ ದ್ವಿಚಕ್ರ ವಾಹನವನ್ನು ಮುದುಂಗಾರು ಕಟ್ಟೆ ಬಸ್‌ ನಿಲ್ದಾಣದ ಬಳಿ ನಿಲ್ಲಿಸಲು ತೆರಳಿದಾಗ ಮೃತದೇಹ ಪತ್ತೆಯಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು.
ಸ್ಥಳಕ್ಕೆ ಕೂಡಲೇ ಕೊಣಾಜೆ ಪೊಲೀಸರು ದೌಡಾಯಿಸಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಿ, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಮೃತ ನಿಯಾಫ್ ಬಾವಿಯ ರಿಂಗ್ ತಯಾರಿಕೆ ಹಾಗೂ ಇತರ ಕೂಲಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ. ಭಾನುವಾರ ಸಂಜೆ ಮನೆ ಬಿಟ್ಟಿದ್ದ ನಿಯಾಫ್ ನಿನ್ನೆ ಬೆಳಗ್ಗೆ ಚಿಕ್ಕಪ್ಪನ ಮನೆಗೆ ತೆರಳಿ ಮಾತಾನಾಡಿ ಹಿಂತಿರುಗಿದ್ದನಂತೆ.
ಸಂಜೆ ಮನೆಗೆ ತೆರಳದ ನಿಯಾಫ್ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದು, ಇಂದು ಮಧ್ಯಾಹ್ನ ವೇಳೆ ಶವವಾಗಿ ಪತ್ತೆಯಾಗಿದ್ದಾನೆ. ಮರಣೋತ್ತರ ಪರೀಕ್ಷೆ ಬಳಿಕವೇ ಸಾವಿಗೆ ನಿಖರ ಕಾರಣವೇನೆಂದು ತಿಳಿದು ಬರಬೇಕಿದೆ.

ಕಳೆದ ವರ್ಷ ಮುದುಂಗಾರುಕಟ್ಟೆಯ ಬಳಿ ಮಹಿಳೆಯ ಸರ ಕಳ್ಳತನ ಪ್ರಕರಣದಲ್ಲಿ ನಿಯಾಫ್ ವಿರುದ್ಧ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಿಯಾಫ್ ಮಾದಕ ಪದಾರ್ಥಗಳ ವ್ಯಸನಿಯೂ ಆಗಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.