ಡೈಲಿ ವಾರ್ತೆ: 23/ಜುಲೈ /2024

ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತ – ನಾಪತ್ತೆಯಾಗಿದ್ದ ಮಹಿಳೆ ಶವ ಪತ್ತೆ, ಎಂಟಕ್ಕೇರಿದ ಮೃತರ ಸಂಖ್ಯೆ!

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರಿನಲ್ಲಿ ಭೂಕುಸಿತ ದುರಂತ ಸಂಭವಿಸಿ ಒಂದು ವಾರ ಕಳೆದಿದೆ. ಕಾರ್ಯಾಚರಣೆ ವೇಳೆ ಮತ್ತೊಂದು ಶವ ಸಿಕ್ಕಿದೆ. ಮೃತರಾದ ಹನ್ನೊಂದು ಜನರಲ್ಲಿ ಈವರೆಗೆ ಒಟ್ಟು 8 ಮೃತದೇಹಗಳು ಪತ್ತೆಯಾಗಿವೆ. ಕಾರ್ಯಾಚರಣೆಗೆ ಆಧುನಿಕ ತಂತ್ರಜ್ಞಾನದ ಮೊರೆಹೋಗಿರುವ ಜಿಲ್ಲಾಡಳಿತ ಇಸ್ರೋ ಜೊತೆಗೆ ಯೋಧರ ನೆರವು ಪಡೆದಿದೆ.

ಒಂದೆಡೆ ಬಿಟ್ಟು ಬಿಡದ ಮಳೆ, ಮತ್ತೊಂದೆಡೆ ಪದೇ ಪದೇ ನೆಲಕ್ಕುರುಳುತ್ತಿರುವ ಗುಡ್ಡದ ಮಣ್ಣು. ಇದರ ನಡುವೆ ಜೀವ ಪಣಕ್ಕಿಟ್ಟು ಕಾರ್ಯಾಚರಣೆ ಮಾಡುತ್ತಿದೆ ರಕ್ಷಣಾ ತಂಡ. ಈಗ ಸಣ್ಣಿ ಹನುಮಂತ ಗೌಡ (67) ಮಹಿಳೆ ಶವ ಸಿಕ್ಕಿದೆ. ಘಟನೆ ನಡೆದ 8 ದಿನದ ಬಳಿಕ ಶವ ಪತ್ತೆಯಾಗಿದೆ.
ಮಣ್ಣಿನ ಕುಸಿತದಿಂದ ನದಿಯಲ್ಲಿ ತೇಲಿಹೋದ ಗಂಗೆಕೊಳ್ಳದ ಲೋಕೇಶ್ ನಾಯ್ಕ, ಶಿರೂರಿನ ಜಗನ್ನಾಥ ಜಟ್ಟಿ, ಕೇರಳ ಮೂಲದ ಅರ್ಜುನ್ ಶವ ಪತ್ತೆಯಾಗಬೇಕಿದೆ. ಶಂಕಿತ ಸ್ಥಳದಲ್ಲಿ ಶೋಧ ಕಾರ್ಯ ಮಾಡಿದರೂ ಟ್ರಕ್, ಟ್ಯಾಂಕರ್‌ಗಳು ಮಾತ್ರ ಪತ್ತೆಯಾಗಿಲ್ಲ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಆರ್ಮಿ ಕಮಾಂಡೋಗಳ ತಂಡದಿಂದ ಶೋಧ ಕಾರ್ಯ ಮುಂದುವರೆದಿದೆ.