ಡೈಲಿ ವಾರ್ತೆ: 25/ಜುಲೈ /2024
ವರದಿ: ವಿದ್ಯಾಧರ ಮೊರಬಾ
ಕಣ್ಮರೆಯಾದವರ ಪತ್ತೆಗೆ ಅವಿರತ ಪ್ರಯತ್ನ: ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್
ಅಂಕೋಲಾ : ಈಗಾಗಲೇ ವಿವಿಧ ತಂಡಗಳಿಂದ ಶಿರೂರು ಗುಡ್ಡದ ದುರಂತದಲ್ಲಿ ಕಣ್ಮರೆಯಾದವರಿಗಾಗಿ ಹಾಗೂ ವಾಹನ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗಿದೆ. ಆದರೆ ಗುರುವಾರ 2 ಪೋಕ್ಲೇನ್, ದ್ರೋಣ್‌ನಲ್ಲಿ 4 ಅಂಶ ಪತ್ತೆಯಾಗಿವೆ. ಇನ್ನು ನೇವಿ ಮತ್ತು ಆರ್ಮಿಯವರು ಪತ್ತೆಹಚ್ಚಿದ ಸ್ಥಳದಲ್ಲಿಯೇ ಇದು ಪತ್ತೆಯಾಗಿರುವುದರಿಂದ ಬಹುತೇಕವಾಗಿ ಶುಕ್ರವಾರ ಇದರ ಬಗ್ಗೆ ಖಚಿತ ಮಾಹಿತಿ ದೊರೆಯಲಿದೆ ಎಂದು ನಿಪುಣರಾಗಿರುವ ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ಹೇಳಿದರು.
ಗುರುವಾರ ಶಿರೂರು ಗುಡ್ಡ ಕುಸಿತ ದುರಂತದ ಕಾರ್ಯಾಚರಣೆ ಕುರಿತಂತೆ ಬೆಳಸೆಯ ಹೆದ್ದಾರಿಯಲ್ಲಿಯೇ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದರು. ಒಟ್ಟೂ 4 ಅಂಶದಲ್ಲಿ ಕ್ಯಾಬಿನ್, ಲಾರಿ, ಟವರ್ ಹಾಗೂ ಕಬ್ಬಿಣಾಂಶದ ಕಂಬ ಇರುವ ಬಗ್ಗೆ ಈಗಾಗಲೇ ಖಚಿತತೆ ಮಾಡಲಾಗಿದೆ. ಇಂದು ರಾತ್ರಿ ಮತ್ತೆ ಕಾರ್ಯಾಚರಣೆ ನಡೆಯಲಿದ್ದು, ಇನ್ನಷ್ಟು ಮಾಹಿತಿಗಳು ತಿಳಿದುಬರಲಿದೆ ಎಂದರು.
ಶಾಸಕ ಸತೀಶ ಸೈಲ್ ಮಾತನಾಡಿ, ಒಂದು ಕಟ್ಟಿಗೆ ತುಂಬಿ ಭಾರತ ಬೆಂಜ್ ಲಾರಿಗಾಗಿ ಇಷ್ಟೊಂದು ಮಹತ್ವ ನೀಡಿದ್ದೀರಿ ಎಂಬ ಆರೋಪ ಕೇಳಿಬರುತ್ತಿದೆ. ಆದರೆ ಈ ಲಾರಿಯ ಕ್ಯಾಬಿನ್‌ನಲ್ಲಿ 6 ದಿನಗಳ ಕಾಲ ಬದಕುಳುವಷ್ಟು ಪ್ರಾಣವಾಯು ಇರುವುದರಿಮದ ಜೀವಂತವಾಗಿರಲು ಸಾಧ್ಯ. ಕೆಲವೊಮ್ಮೆ ವಾತಾ ವರಣದ ಮೇಲೆಯೂ ಅದು ನಿರ್ಧಾರವಾಗುತ್ತದೆ. ಹೀಗಾಗಿ ಆತ ಜೀವಂತ ಇರುವ ಭರವಸೆಯ ಹಿನ್ನೆಲೆಯಲ್ಲಿ ಇಷ್ಟೆಲ್ಲ ಕಾರ್ಯಗಳು ಮಾಡಬೇಕಾಯಿತು. ಆದರೆ ಈಗ 10 ದಿನವಾಗಿದ್ದರಿಂದ ನಾವು ಆ ಭರವಸೆ ಕಳೆದುಕೊಂಡಿದ್ದೇವೆ. ಇದೇ ಲಾರಿಯ ಚಾಲಕ ಕೇರಳದ ಅರ್ಜುನ ಹಾಗೂ ಇಬ್ಬರು ಸ್ಥಳೀಯ ರು ಹಾಗೂ ಒಬ್ಬ ತಮಿಳುನಾಡಿನ ಚಾಲಕ ನೀರಿನಲ್ಲಿ ನಾಪತ್ತೆಯಾಗಿದ್ದಾನೆ. ಕೇವಲ ಸೊಂಟದ ಭಾಗ ದಿಂದ ಕಾಲಿನವರೆಗಿನ ಭಾಗ ಮಾತ್ರ ದೊರೆತಿರುವುದರಿಂದ ಕುಟುಂಬದವರ ಡಿ.ಎನ್.ಎ. ಪರೀಕ್ಷೆಯನ್ನು ಜಿಲ್ಲಾಡಳಿತ ಮತ್ತು ಪೊಲೀಸರು ಮಾಡಿದ್ದಾರೆ. ಅದರ ವರದಿ ಇನ್ನು ಬರಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ, ಎಸ್ಪಿ ನಾರಾಯಣ ಎಂ, ಉಪವಿಭಾಗಾಧಿಕಾರಿ ಕಲ್ಯಾಣ ಕಾಂಬಳೆ, ಸೇರಿದಂತೆ ವಿವಿಧ ಕಾರ್ಯಪಡೆಯವರು ಕೂಡ ಉಪಸ್ಥಿತರಿದ್ದರು.