ಡೈಲಿ ವಾರ್ತೆ: 26/ಜುಲೈ /2024
ಗಿಳಿಯಾರು ಹೊಳೆಯ ಹೂಳು ಸಮಸ್ಯೆ ಪರಿಹಾರಕ್ಕೆ ಶಾಸಕರ ನೇತೃತ್ವದಲ್ಲಿ ಸಭೆ
ಕೋಟ: ಗಿಳಿಯಾರು ಹೊಳೆಯ ಹೂಳು ಸಮಸ್ಯೆ ಪರಿಹಾರಕ್ಕೆ ಸಭೆಯನ್ನು ಶಾಸಕ ಕಿರಣ್ ಕುಮಾರ್
ಕೊಡ್ಗಿಯವರ ನೇತೃತ್ವದಲ್ಲಿ ಆಯೋಜಿಸಲಾಗಿದೆ.
ತೆಕ್ಕಟ್ಟೆ ಮಲ್ಯಾಡಿಯಿಂದ ಚಿತ್ರಪಾಡಿಯ ತನಕ ಹರಿಯುವ ಸೂಲಡ್ಪು ಹೊಳೆಯಲ್ಲಿ ವಿಫರೀತ ಹೂಳು ತುಂಬಿದ್ದು ಇದರಿಂದಾಗ ನೀರಿನ ಹರಿವಿಗೆ ಸಮಸ್ಯೆ ಉಂಟಾಗುತ್ತಿದ್ದು ಪ್ರತೀ ವರ್ಷವೂ ಈ ಭಾಗದಲ್ಲಿ ನೆರೆ ಹಾವಳಿಯಿಂದಾಗಿ ಅಪಾರವಾದ ಕೃಷಿ ಹಾನಿ ಉಟಾಗುತ್ತಿದ್ದು ಈ ಬಗ್ಗೆ ಸ್ಥಳೀಯ ರೈತರು ಇತ್ತೀಚೆಗೆ ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ನೇತೃತ್ವದಲ್ಲಿ ಸಭೆ ನಡೆಸಿದ್ದು ಆ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಪ್ರತಿಯನ್ನು ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರಿಗೆ ನೀಡಿದ್ದರು. ಮನವಿ ಸ್ವೀಕರಿಸಿದ ಶಾಸಕರು ಆಗಸ್ಟ್ ತಿಂಗಳಲ್ಲಿ ಅಧಿಕಾರಿಗಳ ಸಭೆ ನಡೆಸಿ ಹೂಳು ಪರಿಹಾರದ ಕುರಿತು ಸ್ಥಳೀಯ ಮಟ್ಟದಲ್ಲಿ ಸಮಾಲೋಚನೆ ಮಾಡುವುದು ಮತ್ತು ಸರ್ಕಾರದ ಮಟ್ಟದಲ್ಲಿಯೂ ಅನುದಾನದ ಬಗ್ಗೆ ಸಂಬಂಧಪಟ್ಟ ಸಚಿವರಲ್ಲಿ ಮನವಿ ಮಾಡುವ ಬಗ್ಗೆ ಭರವಸೆ ನೀಡಿದ್ದರು.
ಈ ಸಂಬಂಧ ಆಗಸ್ಟ್ ತಿಂಗಳ 21 ರ ಬುಧವಾರದಂದು ಶಾಸಕರಾದ ಕಿರಣ್ ಕುಮಾರ್
ಕೊಡ್ಗಿಯವರ ನೇತೃತ್ವದಲ್ಲಿ ,ಸ್ಥಳೀಯಾಡಳಿತ ಪ್ರತಿನಿಧಿಗಳು,ಎರಡೂ ತಾಲೂಕಿನ ತಹಶೀಲ್ದಾರರು, ಸಂಬಂಧಪಟ್ಟ ನಾಲ್ಕು ಪಂಚಾಯತ್ ಪಿ.ಡಿ.ಓ. ಮತ್ತು ಪಟ್ಟಣ ಪಂಚಾಯತ್ ಅಧಿಕಾರಿಗಳು, ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಮಕ್ಷಮದಲ್ಲಿ ಸಭೆ ನಡೆಸಲಾಗುವುದು, ಆ ಸಂದರ್ಭ ರೈತ ಪರ ಸಂಘಟನೆ, ಸಂತೃಸ್ಥ ರೈತರು ಮತ್ತು ಸಂಘ ಸಂಸ್ಥೆಗಳ ಪ್ರಮುಖರು ಹಾಜರಿರಲಿದ್ದಾರೆ ಎಂಬುದಾಗಿ ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ್ ಗಿಳಿಯಾರ್ ತಿಳಿಸಿದ್ದಾರೆ.