


ಡೈಲಿ ವಾರ್ತೆ: 08/ಸೆ./2025


ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ನೇತೃತ್ವದಲ್ಲಿ ಯಶಸ್ವಿ ಥ್ರೋಬಾಲ್ ಪಂದ್ಯಾಟ

ಕುಂದಾಪುರ: ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ , ಕುಂದಾಪುರ ಹಾಗೂ ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆ ಯಡಾಡಿ-ಮತ್ಯಾಡಿ ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರ ವಲಯ ಮಟ್ಟದ 17ರ ವಯೋಮಾನದ ಬಾಲಕ-ಬಾಲಕಿಯರ ಥ್ರೋಬಾಲ್ ಪಂದ್ಯಾಟವು ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆಯ ಕ್ರೀಡಾಂಗಣದಲ್ಲಿ ಸೋಮವಾರ ಯಶಸ್ವಿಯಾಗಿ ನೆರವೇರಿತು.

“ಕ್ರೀಡೆಯು ದೈಹಿಕ ಕ್ಷಮತೆ ಕಾಪಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.ಇದು ಜೀವನದಲ್ಲಿ ಶಿಸ್ತು ತರುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವಿಕೆಯೇ ಎಲ್ಲಕ್ಕಿಂತ ಮುಖ್ಯವಾದದ್ದು” ಎಂದು ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ, ಸೌಖ್ಯ ಯೋಗ ಟ್ರಸ್ಟ್ ಹೆಬ್ರಿಯ ಅಧ್ಯಕ್ಷರಾಗಿರುವ ಸೀತಾನದಿ ವಿಠಲಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಥ್ರೋಬಾಲ್ ಪಂದ್ಯಾಟದ ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಡಾ.ರಮೇಶ್ ಶೆಟ್ಟಿ ಮಾತನಾಡಿ, “ಪ್ರತಿಯೊಬ್ಬರು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು.ಕ್ರೀಡೆಯಲ್ಲಿನ ಸೋಲು-ಗೆಲುವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. ಕ್ರೀಡೆಯಲ್ಲಿ ಭಾಗವಹಿಸುವುದೇ ಯಶಸ್ಸಿನ ಮೆಟ್ಟಿಲು ಹತ್ತಲು ದಾರಿ ಮಾಡಿಕೊಡುತ್ತದೆ” ಎಂದು ಮಕ್ಕಳಿಗೆ ಕಿವಿಮಾತು ನುಡಿದರು.
ವೇದಿಕೆಯಲ್ಲಿ ಸುಜ್ಞಾನ ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಕುಂದಾಪುರದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸತ್ಯನಾರಾಯಣ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆಯ ಉಪಪ್ರಾಂಶುಪಾಲ ಕರುಣಾಕಾರ ಶೆಟ್ಟಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆಯ ಪ್ರಾಂಶುಪಾಲ ವಿಘ್ನೇಶ್ವರ ಭಟ್, ಹಾಲಾಡಿ ವೃತ್ತದ ಶಿಕ್ಷಣ ಸಂಯೋಜಕರು, ಗ್ರೇಡ್ 1 ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಕುಸುಮಾಕರ್ ಶೆಟ್ಟಿ, ಗ್ರೇಡ್ 2 ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕಿಶನ್ ರಾಜ್ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಜಿಲ್ಲಾ ಉಪಾಧ್ಯಕ್ಷ ಶರತ್ ಕುಮಾರ್ ಕೆ, ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಉದಯ್ ಮಡಿವಾಳ್ ಅವರು ಉಪಸ್ಥಿತರಿದ್ದರು. ರತ್ನಾಕರ್ ನಾಯ್ಕ್ ನಿರೂಪಿಸಿದರು. ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರದೀಪ್ ಕೆ. ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸತೀಶ್ ಕುಮಾರ್ ಧನ್ಯವಾದ ಅರ್ಪಿಸಿದರು.