


ಡೈಲಿ ವಾರ್ತೆ: 08/ಸೆ./2025


ಕುಂದಾಪುರ: ಸಮುದ್ರಕ್ಕೆ ಈಜಲು ಹೋದ ಬೆಂಗಳೂರು ಮೂಲದ ಮೂವರು ವಿದ್ಯಾರ್ಥಿಗಳು ಸಾವು, ಒಬ್ಬನ ರಕ್ಷಣೆ

ಕುಂದಾಪುರ : ಬೆಂಗಳೂರು ಮೂಲದ ವಿವಿಧ ಕಾಲೇಜುಗಳ ಹತ್ತು ವಿದ್ಯಾರ್ಥಿಗಳ ಪೈಕಿ ಒಂಭತ್ತು ಜನ ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಮಾರಿ ಅಲೆಗಳಿಗೆ ತುತ್ತಾಗಿದ್ದು ಮೂವರು ಸಾವನ್ನಪ್ಪಿ ಒಬ್ಬ ಗಂಭೀರಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಬೆಂಗಳೂರು ಮೂಲದ ಗೌತಮ್ (19), ಲೋಕೇಶ್ (19), ಆಶೀಷ್ (18) ಸಾವನ್ನಪ್ಪಿದರೆ ನಿರೂಪ್ (19) ಗಂಭೀರಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೆಂಗಳೂರಿನಿಂದ ಧನುಷ್, ರಾಹುಲ್, ಅಂಜನ್, ಕುಶಾಲ್, ಅನೀಷ್, ನಿತಿನ್, ನಿರೂಪ್, ಲೋಕೇಶ್, ಗೌತಮ್ ಹಾಗೂ ಆಶಿಷ್ ಎಂಬ 10 ಮಂದಿ ಯುವಕರ ತಂಡ ಬೆಂಗಳೂರಿನಿಂದ ರೈಲಿನಲ್ಲಿ ಕುಂದಾಪುರಕ್ಕೆ ಬಂದಿದ್ದು, ಕುಂಬಾಶಿಯ ಗಾಯಿತ್ರಿ ಕಂಪರ್ಟ್ ಹೆಸರಿನ ಲಾಡ್ಜ್ ನಲ್ಲಿ ತಂಗಿದ್ದರು.
ಭಾನುವಾರ ಬೆಳಿಗ್ಗೆ ಗೋಪಾಡಿ ಚರ್ಕಿಕಡು ಎಂಬಲ್ಲಿ ಸಮುದ್ರಕ್ಕೆ ಬಂದಿದ್ದು ಸಮುದ್ರ ಸ್ನಾನ ಮಾಡಿದ್ದರು. ಈ ಸಂದರ್ಭ ಸ್ಥಳೀಯರು ಯುವಕರನ್ನು ಗದರಿಸಿ ಈಗ ಸಮುದ್ರಕ್ಕೆ ಇಳಿಯಬೇಡಿ, ಮಾರಿ ಅಲೆಯಿದೆ ಎಂದು ಎಚ್ಚರಿಸಿದ್ದರು. ಬಳಿಕ ಯುವಕರ ತಂಡ ಲಾಡ್ಜ್ ಗೆ ತೆರಳಿತ್ತು. ಮಧ್ಯಾಹ್ನ ಮತ್ತೆ ಇಂದು ಮಧ್ಯಾಹ್ನ 1.40ರ ಸಮಾರಿಗೆ 9 ಮಂದಿ ಯುವಕರು ಸಮುದ್ರ ಸ್ನಾನ ಮಾಡಲೆಂದು ಗೋಪಾಡಿ ಚೆರ್ಕಿ ಕಡು ಎಂಬಲ್ಲಿ ಸಮುದ್ರಕ್ಕೆ ಇಳಿದಿದ್ದಾರೆ. ಆದರೆ ಸಮುದ್ರದ ಅಬ್ಬರದ ಮಾರಿ ಅಲೆಗೆ ನಿರೂಪ್, ಲೋಕೇಶ್, ಗೌತಮ್ ಹಾಗೂ ಆಶಿಷ್ ನಾಲ್ಕು ಯುವಕರು ನೀರುಪಾಲಾಗಿದ್ದಾರೆ. ಆ ಸಂದರ್ಭ ಜೋರಾದ ಬೊಬ್ಬೆ ಕೇಳಿ ಸ್ಥಳೀಯ ನಿವಾಸಿ ಉಮೇಶ್ ಎಂಬುವರು ಓಡಿ ಬಂದು ನಿರೂಪ್ ಎಂಬಾತನನ್ನು ದಡಕ್ಕೆ ಎಳೆದು ತಂದಿದ್ದಾರೆ. ಆದರೆ ಅದಾಗಲೇ ಉಳಿದ ಮೂವರು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾರೆ.
ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರವಾಸಿಗರು ಸಮುದ್ರಕ್ಕೆ ಇಳಿಯುವ ಸಾಹಸ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
ಮೂರೂ ಮೃತದೇಹಗಳನ್ನು ಕುಂದಾಪುರ ಸರ್ಕಾರೀ ಶವಾಗಾರಕ್ಕೆ ತರಲಾಗಿದ್ದು ಬಳಿಕ ಮರಣೋತ್ತರ ಶವ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.