



ಡೈಲಿ ವಾರ್ತೆ: 26/ಆಗಸ್ಟ್/2024


ಭಟ್ಕಳ: ವಾಹನಕ್ಕೆ ದಂಡ ವಸೂಲಿ ಹಣ ಖಾಸಗಿ ವ್ಯಕ್ತಿಗೆ ಪೋನ್ ಪೇ – ಪಿಎಸ್ ಐ ಯಲ್ಲಪ್ಪ ಮಾದರ್ ಅಮಾನತು
ಭಟ್ಕಳ: ಹೆಲ್ಮಟ್ ಧರಿಸದೆ ವಾಹನ ಚಲಾವಣೆ ಮಾಡಿದಕ್ಕೆ ದಂಡ ವಸೂಲಿ ಮಾಡುತ್ತಿದ್ದ ಭಟ್ಕಳ ಶಹರ ಠಾಣೆಯ ಪಿಎಸ್ ಐ ಯಲ್ಲಪ್ಪ ಮಾದರ ಅವರು ಪೊಲೀಸ್ ಇಲಾಖೆ ನೀಡಿದ ಕ್ಯೂಆರ್ ಕೋಡ್ ಬಳಸದೆ, ಖಾಸಗಿ ವ್ಯಕ್ತಿಗೆ ಪೋನ್ ಪೇ ಮಾಡಿಸಿದ ಪ್ರಕರಣದಲ್ಲಿ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಎಸ್ಪಿ ಎಂ.ನಾರಾಯಣ ಅವರು ಯಲ್ಲಪ್ಪ ಮಾದರ ಅವರನ್ನು ಅಮಾನತ್ ಮಾಡಿದ್ದಾರೆ.
ಇಲಾಖೆ ತನಿಖೆ ಇನ್ನಷ್ಟೆ ನಡೆಯಬೇಕಿದೆ. ಯಲ್ಲಪ್ಪ ಮಾದರ ದಂಡ ವಸೂಲಿಯ ಬಗ್ಗೆ ಅನುಮಾನ ಇದ್ದ ಕಾರಣ ಭಟ್ಕಳದ ಕೆಲ ಪತ್ರಕರ್ತರು ಉದ್ದೇಶ ಪೂರ್ವಕವಾಗಿ ಹೆಲ್ಮೆಟ್ ಹಾಕದೆ ಅವರ ಮುಂದೆ ವಾಹನ ಚಲಾಯಿಸಿ,ದಂಡ ಕಟ್ಟಲು ಮುಂದಾದರು. ಆಗ ಪಿಎಸ್ ಐ ಸರಕಾರ ನೀಡಿದ ಕ್ಯೂಅರ್ ಕೋಡ್ ಬಳಸದೆ , ಒಂದು ನಂಬರ್ ಗೆ ಪೋನ್ ಪೇ ಮಾಡಲು ಸೂಚಿಸಿದರು. ಪೋನ್ ಪೇ ಮಾಡಿದವರು, ಟ್ರೂ ಕಾಲ್ ನಲ್ಲಿ ಆ ನಂಬರ್ ಪರೀಕ್ಷೆ ಮಾಡಿದಾಗ ಅದು ವಿನಾಯಕ ಶೇಟ್ ಎಂಬ ಬಂಗಾರದ ಆಭರಣ ವ್ಯಾಪಾರಿಯದಾಗಿತ್ತು. ಇದನ್ನೇ ಪತ್ರಕರ್ತರು ಸುದ್ದಿ ಮಾಡಿದರು.
ಎಸ್ಪಿ ಗಮನಕ್ಕೆ ಈ ಸಂಗತಿ ಬಂದು, ಇದನ್ನು ಮೇಲಾಧಿಕಾರಿಯಿಂದ ಚೆಕ್ ಮಾಡಿಸಿದಾಗ, ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಪಿಎಸ್ ಐ ಯಲ್ಲಪ್ಪ ಮಾದರ ಅವರನ್ನು ಅಮಾನತ್ ಮಾಡಿ ಆದೇಶ ಹೊರಡಿಸಿದರು.