ಡೈಲಿ ವಾರ್ತೆ: 27/ಆಗಸ್ಟ್/2024
ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ.!
ಚಿಕ್ಕಬಳ್ಳಾಪುರ: ಪೊಲೀಸ್ ಕಾನ್ಸ್ಟೇಬಲ್ ಹಾಗೂ ಬಿ.ಎ ಓದುತ್ತಿರುವ ವಿದ್ಯಾರ್ಥಿನಿ – ಇಬ್ಬರೂ ವಯಸ್ಕರು. ಮುಕ್ತ ವಿವಿ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ಮೂಲಕ ಪರಿಚಯವಾದ ಅವರಿಬ್ಬರ ಮಧ್ಯೆ ಪ್ರೀತಿ, ಪ್ರೇಮ, ಪ್ರಣಯ ಅಂತೆಲ್ಲಾ ಆಗಿ ಮದುವೆವರೆಗೂ ಸಾಗಿ ಬಂದಿದೆ. ಜೋಡಿ ಇನ್ನೇನು ಮದುವೆ ಮಂಟಪಕ್ಕೆ ಹೋಗಿ ಮದುವೆ ಮಾಡಿಕೊಳ್ಳಬೇಕಿತ್ತು. ಅಷ್ಟರಲ್ಲಿ ಯೂಟರ್ನ್ ಹೊಡೆದ ಪೊಲೀಸ್ ಕಾನ್ಸ್ಟೇಬಲ್ ಮದುವೆ ಬೇಡಾ ಅಂದುಬಿಟ್ಟಿದ್ದಾನೆ. ಇದರಿಂದ ನೊಂದ ಆತನ ಪ್ರಿಯತಮೆ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದಕ್ಕೆ ಬೆದರಿದ ಪೊಲೀಸ್ ಕಾನ್ಸ್ಟೇಬಲ್ ಮಹಾಶಯ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಆತನ ಹೆಸರು ತಿಮ್ಮಣ್ಣ ರಾಮಪ್ಪ ಬುಸರರೆಡ್ಡಿ, ವಯಸ್ಸು 28 ವರ್ಷ, ಮೂಲತಃ ಬಾಗಲಕೋಟೆ ಜಿಲ್ಲೆ, ಬೀಳಗಿ ತಾಲ್ಲೂಕು, ಸೊಣ್ಣ ಗ್ರಾಮದವನು. ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಈಕೆಯ ಹೆಸರು ಶಿರೀಷಾ, ವಯಸ್ಸು 23 ವರ್ಷ, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕು, ಸೋಮೇನಹಳ್ಳಿ ನಿವಾಸಿ. ಇಬ್ಬರ ಮಧ್ಯೆ ಆಗಸ್ಟ್ 7 ರಂದು ದೇವಸ್ಥಾನವೊಂದರಲ್ಲಿ ಅದ್ದೂರಿ ಮದುವೆ ನಡೆಯಬೇಕಿತ್ತು. ಮದುವೆಯ ಸಿದ್ದತೆಗಳು ಆದ ಮೇಲೆ ವರ ಪೊಲೀಸ್ ಕಾನ್ಸ್ಟೇಬಲ್ ಯೂಟರ್ನ್ ಹೊಡೆದು ಮದುವೆಗೆ ನಿರಾಕರಿಸಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ .
ವಾಟ್ಸಾಪ್ನಲ್ಲಿ ತಿಮ್ಮಣ್ಣ-ಶಿರೀಷಾ ಪ್ರೇಮಾಂಕುರ:
ಒಂದು ವರ್ಷದ ಹಿಂದೆ ಮುಕ್ತ ವಿವಿ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ಮೂಲಕ ಪರಿಚಯವಾದ ತಿಮ್ಮಣ್ಣ ಹಾಗೂ ಶಿರೀಷಾ ಪರಿಚಯ ಮದುವೆವರೆಗೂ ಬಂದಿದೆ. ಕಳೆದ ಒಂದು ವರ್ಷದಿಂದ ಇಬ್ಬರ ಮಧ್ಯೆ ಪ್ರೀತಿ, ಪ್ರೇಮ, ಪ್ರಣಯ ಏರ್ಪಟ್ಟಿದೆ. ತಿಮ್ಮಣ್ಣ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಪ್ರೀಯತಮೆಯನ್ನು ದುರುಪಯೋಗ ಮಾಡಿಕೊಂಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.
ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ್ದು ಏಕೆ:
ಎಲ್ಲಾ ಅಂದುಕೊಂಡಂತೆ ಆಗಿದ್ರೆ ಅಗಸ್ಟ್ 7 ರಂದು ಬುಧವಾರ ಆವತಿಯ ತಿಮ್ಮರಾಯಸ್ವಾಮಿ ಬೆಟ್ಟದಲ್ಲಿ ಮದುವೆ ನಡೆಯಬೇಕಿತ್ತು. ಆದ್ರೆ ತಿಮ್ಮಣ್ಣ ಮೇಲ್ಜಾತಿ ಎನ್ನುವ ಕಾರಣ ಅವರ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತವಾಗಿದೆಯೆಂದು ನೆಪ ಮಾಡಿಕೊಂಡು ಪ್ರಿಯತಮೆ ಶಿರೀಷಾಗೆ ಮೋಸ ಮಾಡಲು ಯತ್ನಿಸಿದ್ದಾನಂತೆ. ಇದರಿಂದ ನೊಂದ ಶಿರೀಷಾ ನಿನ್ನೆ ಸಂಜೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇನ್ನು ಶಿರೀಷಾ ಆತ್ಮಹತ್ಯೆಗೆ ಯತ್ನಿಸುತ್ತಿದ್ದಂತೆ ತಾನೂ ಸಹಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.