ಡೈಲಿ ವಾರ್ತೆ: 10/OCT/2024
ಬೈಂದೂರು: ಅಕ್ರಮ ಪಟಾಕಿ ದಾಸ್ತಾನುಗೆ ಪೊಲೀಸ್ ದಾಳಿ, 4ಲಕ್ಷ ರೂ. ಮೌಲ್ಯದ ಪಟಾಕಿ ವಶಕ್ಕೆ
ಕುಂದಾಪುರ: ಅಕ್ರಮವಾಗಿ ಪಟಾಕಿ ದಾಸ್ತಾನಿಟ್ಟ ಮನೆಗೆ ಪೊಲೀಸ್ ದಾಳಿ ನಡೆಸಿ ಸುಮಾರು 4 ಲಕ್ಷ ರೂ. ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಂಡ ಘಟನೆ ಅ. 9 ರಂದು ಬುಧವಾರ ಬೈಂದೂರು ತಾಲೂಕಿನ ಉಪ್ಪುಂದದ ಕಂಚಿಕಾನ್ ಎಂಬಲ್ಲಿ ನಡೆದಿದೆ.
ಉಪ್ಪುಂದದ ಕಂಚಿಕಾನ್ ಇಲ್ಲಿನ ದತ್ತಾತ್ರೇಯ ಶೇಟ್ ಎಂಬಾತ ಪಟಾಕಿ ಅಕ್ರಮ ದಾಸ್ತಾನು ಮಾಡಿಟ್ಟುಕೊಂಡ ಆರೋಪಿಯಾಗಿದ್ದಾನೆ.
ಇವರು ಹಿಂದಿನಿಂದಲೂ ದೀಪಾವಳಿ ಹಾಗೂ ಚೌತಿ ಹಬ್ಬದ ಸಂದರ್ಭ ಪಟಾಕಿ ಮಾರಾಟ ಮಾಡುತ್ತಿದ್ದರು. ಅಲ್ಲದೆ ಶೇಟ್ ಪಟಾಕಿ ಅಕ್ರಮ ದಾಸ್ತಾನು ಇಟ್ಟಿರುವುದರ ಬಗ್ಗೆ ಸ್ಥಳೀಯರು ದೂರು ನೀಡಿರುವುದರಿಂದ
ಪೊಲೀಸರು ಬುಧವಾರ ತಪಾಸಣೆ ನಡೆಸಿದಾಗ ವಿವಿಧ ಬಗೆಯ ಸುಡುಮದ್ದುಗಳು, ಜಿಲೆಟಿನ್ ಕಡ್ಡಿಗಳು ಮೊದಲಾದ ಪಟಾಕಿಗಳನ್ನು ಅಕ್ರಮವಾಗಿ ದಾಸ್ತಾನು ಇಟ್ಟಿರುವುದು ಪತ್ತೆಯಾಗಿದೆ.
ಸುಮಾರು 4 ಲಕ್ಷ ರೂ. ಅಧಿಕ ಮೌಲ್ಯದ ಪಟಾಕಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.