ಡೈಲಿ ವಾರ್ತೆ: 13/OCT/2024

ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಕಾರು: ದಂಪತಿಗಳು ಪಾರು

ಕೊಚ್ಚಿ: ಯುವ ದಂಪತಿಗಳು ಪ್ರಯಾಣಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ 15 ಅಡಿ ಬಾವಿಗೆ ಬಿದ್ದು ದಂಪತಿ ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ಕೇರಳದ ಪಟ್ಟಿಮಟ್ಟಂ ಬಳಿ ಸಂಭವಿಸಿದೆ.

ಬಾವಿಗೆ ಬಿದ್ದು ಪವಾಡ ಸದೃಶ ರೀತಿಯಲ್ಲಿ ಪಾರಾದ ದಂಪತಿ ಕಾರ್ತಿಕ್ ಹಾಗೂ ಅವರ ಪತ್ನಿ ವಿಸ್ಮಯ ಎಂದು ತಿಳಿದು ಬಂದಿದೆ.

ಈ ಯುವ ದಂಪತಿಗಳು ಪ್ರಯಾಣಿಸುತ್ತಿದ್ದ ಕಾರು ಕೊಳಂಚೇರಿ ಸಮೀಪ ರಸ್ತೆ ಸರಿಯಾಗಿ ಕಾಣದೆ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿದೆ. ಈ ವೇಳೆಗೆ ಕಾರಿನ ಬ್ರೇಕ್‌ ಒತ್ತಿದ್ದರೂ ಆ ವೇಳೆಗಾಗಲೇ ಕಾರು ಬಾವಿಯ ಆವರಣ ಗೋಡೆಗೆ ಡಿಕ್ಕಿ ಹೊಡೆದು ನಿಧಾನವಾಗಿ ಬಾವಿಯೊಳಗೆ ಜಾರಿದೆ. ಬಾವಿಯಲ್ಲಿ ಐದು ಅಡಿ ನೀರಿತ್ತು. ಕಾರು ನೀರಿನಲ್ಲಿ ಮುಳುತ್ತಿರುವುದನ್ನು ಗಮನಿಸಿದ ದಂಪತಿ ತಕ್ಷಣ ಹಿಂಬದಿ ಡೋರ್ ತೆಗೆದು ಕಾರಿನ ಮೇಲ್ಬಾಗಕ್ಕೆ ಬಂದಿದ್ದಾರೆ. ಈ ವೇಳೆ ಸ್ಥಳೀಯರು ಕೂಡಾ ಆಗಮಿಸಿದ್ದು, ಇಬ್ಬರ ರಕ್ಷಣೆ ಮಾಡಿದ್ದಾರೆ.

ಸ್ಥಳೀಯರು ಕಾರು ಬಾವಿಗೆ ಬೀಳುವುದನ್ನು ನೋಡಿದ್ದರಿಂದ ತಕ್ಷಣ ಹಗ್ಗ ಹಾಗೂ ಏಣಿಯ ಸಹಾಯದಿಂದ ಬಾವಿಯಲ್ಲಿದ್ದ ದಂಪತಿಯನ್ನು ಮೇಲಕ್ಕೆ ಕರೆತಂದಿದ್ದಾರೆ.
ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ತಂಡ ಬಾವಿಯಲ್ಲಿದ್ದ ಕಾರನ್ನು ಮೇಲೆತ್ತಿದ್ದಾರೆ