ಡೈಲಿ ವಾರ್ತೆ: 13/OCT/2024

ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಂಧಿತ ಬಾಂಗ್ಲಾ ಪ್ರಜೆ – ಒಂದು ವಾರ ಕಸ್ಟಡಿಗೆ

ಮಂಗಳೂರು: ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈಗೆ ತೆರಳುವ ವೇಳೆ ಬಂಧಿತನಾಗಿರುವ ಬಾಂಗ್ಲಾ ಪ್ರಜೆ ಮಹಮ್ಮದ್‌ ಮಾಣಿಕ್‌ನನ್ನು ಪೊಲೀಸರು ಒಂದು ವಾರ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಈತನ ವಿರುದ್ಧ ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಕಸ್ಟಡಿಗೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಶುಕ್ರವಾರ ಸಂಜೆ 5.45ರ ವೇಳೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್‌ ವಿಭಾಗ ಕೌಂಟರ್‌ ನಂ.6 ರಲ್ಲಿ ಮಹಮ್ಮದ್‌ ಮಾಣಿಕ್‌ ಭಾರತೀಯ ಪಾಸ್‌ ಪೊರ್ಟ್‌ ಹಾಗೂ ಇತರೆ ದಾಖಲಾತಿಗಳನ್ನು ಹಾಜರುಪಡಿಸಿದ್ದಾನೆ.
ಈ ವೇಳೆ ದಾಖಲೆಗಳ ಬಗ್ಗೆ ಅನುಮಾನಗೊಂಡು ಆತನನ್ನು ವಿಚಾರಣೆ ಮಾಡಿದಾಗ ಬಾಂಗ್ಲದೇಶದ ಪ್ರಜೆ ತಿಳಿದು ಬಂದಿದೆ.
ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆ ಮಾಣಿಕ್‌ಚೌಕ್‌ನ ನಿವಾಸಿಯಾಗಿದ್ದಾನೆ. ಬಾಂಗ್ಲದೇಶದ ರಾಷ್ಟ್ರೀಯ ಗುರುತು ಚೀಟಿ ಸಂಖ್ಯೆ 601 ಆಗಿದ್ದು ಈತನು 2017 ರಲ್ಲಿ ಇಂಡೋ -ಬಾಂಗ್ಲ ಅಂತರಾಷ್ಟ್ರೀಯ ಗಡೀರೇಖೆ ಪಶ್ಚಿಮ ಬಂಗಾಳದ ಮುರ್ಷಿದಬಾದ್‌ ಜಿಲ್ಲೆಯ ಲಾಲ್‌ಗೊಲ್‌ ಮುಖೇನ ಭಾರತಕ್ಕೆ ಬಂದಿದ್ದ. ಶೆಲ್ಡಾ-ಹೌರ-ಚೆನ್ನೈ ಮುಖಾಂತರ ಮಂಗಳೂರು ಮೂಡಬಿದರೆ ಮೂಲಕ ಉಡುಪಿಗೆ ಬಂದಿದ್ದ ಎಂದು ತಿಳಿದು ಬಂದಿದೆ.