ಡೈಲಿ ವಾರ್ತೆ: 12/NOV/2024
ರಸ್ತೆಯಲ್ಲಿ ಸಿಕ್ಕಿದ ಲಕ್ಷಾಂತರ ರೂ. ಮೌಲ್ಯದ ಚಿನ್ನ ಹಾಗೂ ಇಲೆಕ್ಟ್ರಾನಿಕ್ ವಸ್ತುಗಳಿರುವ ಬ್ಯಾಗನ್ನು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಶಿರೂರು ಅಬ್ದುಲ್ ಜಾವ್ವದ್
ಬೈಂದೂರು: ರಸ್ತೆಯಲ್ಲಿ ಸಿಕ್ಕಿದ ಲಕ್ಷಾಂತರ ರೂ. ಮೌಲ್ಯದ ಚಿನ್ನ ಹಾಗೂ ಇಲೆಕ್ಟ್ರಾನಿಕ್ ವಸ್ತುಗಳಿರುವ ಬ್ಯಾಗನ್ನು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ನ. 11 ರಂದು ಬೈಂದೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಶಿರೂರಿನ ಯುವಕ ಅಬ್ದುಲ್ ಜಾವ್ವದ್ ಅವರು ನ. 11 ರಂದು ಬೆಳಿಗ್ಗೆ 6:30 ರ ಸಮಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಟ್ಕಳದಿಂದ ಶಿರೂರು ಕಡೆಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಶಿರೂರಿನ ಕರಿಕಟ್ಟೆ ಎಂಬಲ್ಲಿ ಹೆದ್ದಾರಿ ಬದಿಯಲ್ಲಿ ಅನಾಥವಾಗಿ ಬಿದ್ದಿದ್ದ ಬ್ಯಾಗೊಂದನ್ನು ಕಂಡು ಬೈಕ್ ನಿಲ್ಲಿಸಿ ಬ್ಯಾಗನ್ನು ಎತ್ತಿಕೊಂಡು ಮನೆಗೆ ಬಂದು ಪರಿಶೀಲಿಸಿದಾಗ ಅದರಲ್ಲಿ ರೂ. 2.5 ಲಕ್ಷ ಬೆಲೆಬಾಳುವ ಚಿನ್ನ ಹಾಗೂ ಇಲೆಕ್ಟ್ರಾನಿಕ್ ವಸ್ತುಗಳಿರುವುದು ಕಂಡು ಬಂದಿದ್ದು ಬೇರೆ ಯಾವುದೇ ವಿಳಾಸಗಳು ಇದ್ದಿರುವುದಿಲ್ಲ.
ಅಲ್ಲದೆ ಬ್ಯಾಗ್ ನಲ್ಲಿ ಒಂದು ಹಾರ್ಡ್ ಡಿಸ್ಕ್ ಇರುವುದು ಕಂಡು ಬಂದಿದ್ದು ಅದನ್ನು
ಪರಿಶೀಲಿಸಿದಾಗ ಒಂದು ಮೊಬೈಲ್ ನಂಬರ್ ದೊರಕಿದ್ದು ಅದರ ಆಧಾರದ ಮೇಲೆ ವಾರಸುದಾರರನ್ನು ಪತ್ತೆ ಹಚ್ಚಿ ಬ್ಯಾಗನ್ನು ಹಿಂದಿರುಗಿಸಿರುತ್ತಾರೆ.
ಬ್ಯಾಗ್ ಕಳೆದುಕೊಂಡ ವಾರಸುದಾರರು ಕೇರಳ ಮೂಲದವರು ಎಂದು ತಿಳಿದು ಬಂದಿದೆ.
ಘಟನೆ ವಿವರ:
ಕೇರಳದ ವಿನೋದ್ ಹಾಗೂ ಸ್ವಾತಿ ದಂಪತಿಗಳು ಕೊಲ್ಲೂರು ದೇವಸ್ಥಾನಕ್ಕೆ ಬೆಂಗಳೂರಿಂದ ಶಿರೂರಿಗೆ ರೈಲಿನಲ್ಲಿ ಬಂದಿದ್ದರು.
ಸೋಮವಾರ ಮುಂಜಾನೆ ಶಿರೂರು ರೈಲ್ವೆ ಸ್ಟೇಷನ್ ನಲ್ಲಿ ಇಳಿದು ಆಟೋ ರಿಕ್ಷಾವೊಂದರಲ್ಲಿ ಬೈಂದೂರು ಕಡೆಗೆ ಹೋಗುತ್ತಿದ್ದ ವೇಳೆ ಶಿರೂರಿನ ಕರಿಕಟ್ಟೆ ಎಂಬಲ್ಲಿ ಟ್ರಾಲಿ ಮೇಲೆ ಇರಿಸಿದ್ದ ಬ್ಯಾಗ್ ಜಾರಿ ಕೆಳಗೆ ಬಿದ್ದಿರುತ್ತದೆ.
ಅದೇ ದಾರಿಯಲ್ಲಿ ಬೈಕ್ ನಲ್ಲಿ ಬರುತ್ತಿದ್ದ ಶಿರೂರು ಅಬ್ದುಲ್ ಜಾವ್ವೆದ್ ಅವರಿಗೆ ಅನಾಥವಾಗಿ ಬಿದ್ದಿದ್ದ ಬ್ಯಾಗ್ ನ್ನು ಕಂಡು ಅದನ್ನು ಎತ್ತಿಕೊಂಡು ಮನೆಗೆ ಹೋಗಿ ಪರಿಶೀಲಿಸಿದಾಗ ಅದರಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ, ಇಲೆಕ್ಟ್ರಾನಿಕ್ ವಸ್ತುಗಳಿರುವುದು ಕಂಡು ಬಂದಿದೆ. ಅಲ್ಲದೆ ವಾರಿಸುದಾರರನ್ನು ಸಂಪರ್ಕಿಸಲು ಯಾವುದೇ ವಿಳಾಸ ಇಲ್ಲದೆ ಕೊನೆಗೆ ಅದರಲ್ಲಿ ಇದ್ದ ಹಾರ್ಡ್ ಡಿಸ್ಕ್ ನಲ್ಲಿರುವ ಮೊಬೈಲ್ ನಂಬರ್ ನಿಂದ ಕೇರಳ ದಂಪತಿಗಳನ್ನು ಪತ್ತೆ ಹಚ್ಚಿ ರಸ್ತೆಯಲ್ಲಿ ಸಿಕ್ಕಿದ 2.5 ರೂ. ಲಕ್ಷ ಮೌಲ್ಯದ ಚಿನ್ನ ಇರುವ ಬ್ಯಾಗನ್ನು ಬೈಂದೂರು ಪೊಲೀಸ್ ಸ್ಟೇಷನ್ ಗೆ ನೀಡಿ ಪೊಲೀಸರ ಸಮ್ಮುಖದಲ್ಲೇ ಬ್ಯಾಗ್ ವಾರಸುದಾರರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.
ಅಬ್ದುಲ್ ಜಾವ್ವೆದ್ ಅವರ ಪ್ರಾಮಾಣಿಕತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.