ಡೈಲಿ ವಾರ್ತೆ:10/DEC/2024
ಹೆಗ್ಗುಂಜೆ ರಾಜೀವ್ ಶೆಟ್ಟಿ ಕೆಪಿಎಸ್ ಲೋಕಾರ್ಪಣೆ
ಬ್ರಹ್ಮಾವರ: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರೀಟೆಬಲ್ ಟ್ರಸ್ ಇವರಿಂದ 3 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಕೆಲಸಗಳ ಲೋಕಾರ್ಪಣೆ ಹಾಗೂ ಈ ಕಾಲೇಜನ್ನು ಹೆಗ್ಗುಂಜೆ ರಾಜೀವ ಶೆಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ನಾಮಕರಣ ಸಮಾರಂಭ ಡಿ.12ರಂದು ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಹಾಲಾಡಿ ಶ್ರೀನಿವಾಸ ಶೆಟ್ಟಿ (ಎಚ್.ಎಸ್ ಶೆಟ್ಟಿ) ಹೇಳಿದರು.
ಅವರು ಬ್ರಹ್ಮಾವರದ ಗಜಾನನ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಬಡವರ, ರೈತರ, ಗೂಡಂಗಡಿಯವರ, ಒಟ್ಟಾರೆ ಆರ್ಥಿಕ ಅಶಕ್ತರ ಮನೆಯ ಪ್ರತಿಭಾನ್ವಿತ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು, ಈ ಶಾಲೆಯನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ಇರಿಸಿಕೊಳ್ಳಲಾಗಿದೆ.
ಆರಂಭದಲ್ಲಿ ಶಾಲೆಯಲ್ಲಿನ ಜಾಗದ ಕೊರತೆ ಕಟ್ಟಡದ ಅವಶ್ಯಕತೆಯನ್ನು ಮನಗಂಡು ಮಾಜಿ ಶಾಸಕ ರಘುಪತಿ ಭಟ್ ಅವರು ಟ್ರಸ್ಟ್ ವತಿಯಿಂದ ಅಭಿವೃದ್ಧಿ ಕೆಲಸ ಮಾಡುವಂತೆ ಕೋರಿದರು. ಈ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿ ಅಗತ್ಯತೆಗೆ ಅನುಗುಣವಾಗಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ, ಶೌಚಾಲಯ, ಎಲ್‌ಕೆಜಿ ಯುಕೆಜಿ ಆರಂಭ ಹಾಗೂ ಶಿಕ್ಷಕರ ನೇಮಕ ಇನ್ನಿತರ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ರಾಜ್ಯದಲ್ಲೇ ಪ್ರಪ್ರಥಮ ಭಾರಿಗೆ ಖಾಸಗಿ ಸಹಭಾಗಿತ್ವದಲ್ಲಿ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಆರಂಭಕ್ಕೆ ಯೋಜನೆ ರೂಪಿಸಿ ಯಶಸ್ವಿಯಾಗಿ ಪೂರೈಸಿದ್ದೇವೆ.
ಡಿ.12ರಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಲಿದ್ದು, ಹೊಸ ಕಟ್ಟಡ ಮತ್ತು ಸಭೆಯ ಉದ್ಘಾಟನೆಯನ್ನು ಅಂತರಾಷ್ಟ್ರೀಯ ಶಿಕ್ಷಣ ತಜ್ಞ ಡಾ. ಗುರುರಾಜ್ ಖರ್ಜಗಿ ನೆರವೇರಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೆಗ್ಗುಂಜೆ ರಾಜೀವ ಶೆಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಲೋಕಾರ್ಪಣೆ ಮಾಡಲಿದ್ದಾರೆ. ಕಟ್ಟಡದ ಹಸ್ತಾಂತರವನ್ನು ಮಾಜಿ ಶಾಸಕ ಕೆ.ರಘುಪತಿ ಭಟ್ ನೆರವೇರಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ 4 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಶಿಕ್ಷಣ ತಜ್ಞ ಗುರುರಾಜ್ ಖರ್ಜಗಿಯವರ ಪ್ರೇರಣಾತ್ಮಕ ನುಡಿಗಳನ್ನು ಕೇಳಲು ಎರಡು ಸಾವಿರ ಮಂದಿ ಶಿಕ್ಷಕರನ್ನು ಆಹ್ವಾನಿಸಲಾಗಿದೆ.
ಟ್ರಸ್ಟ್‌ನ ಕಾರ್ಯವೈಖರಿ ಬಗ್ಗೆ ಮಾತನಾಡಿದ ಅವರು, ಮೈಸೂರು ಮರ್ಕಂಟೈಲ್ ಕಂಪನಿ ಲಿಮಿಟೆಡ್ (ಎಂ.ಎಂ.ಸಿ.ಎಲ್) ನೆರವಿನೊಂದಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಾಲಾ ಕಟ್ಟಡಗಳ ನಿರ್ಮಾಣ, ವಿದ್ಯಾರ್ಥಿಗಳಿಗೆ ನಿರಂತರವಾಗಿ ಉಚಿತ ಸಮವಸ್ತ್ರ ವಿತರಣೆ, ವಿದ್ಯಾರ್ಥಿ ವೇತನ, ಮಧ್ಯಾಹ್ನ ಊಟಕ್ಕೆ ದೇಣಿಗೆ, ಶಾಲಾ ಕಂಪ್ಯೂಟರ್ ಲ್ಯಾಬ್‌ಗಳ ವ್ಯವಸ್ಥೆ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣ, ಬಡ ಮತ್ತು ನಿರ್ಗತಿಕರಿಗೆ ವೈದ್ಯಕೀಯ ನೆರವು ನೀಡುವುದು; ಯಕ್ಷಗಾನ ಕಲಾವಿದರಿಗೆ ಮನೆ ನಿರ್ಮಿಸಿ ಕೊಡುವುದು, ಕರೋನಾ ಸಾಂಕ್ರಾಮಿಕ ಸಂಕಷ್ಟದ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣಗಳ ದಾನ, ಇತ್ಯಾದಿ ಶೈಕ್ಷಣಿಕ ದೀನದಲಿತರಿಗೆ ಮನೆ ನಿರ್ಮಾಣ ಕಾರ್ಯ ಹಾಗೂ ಸಾಮಾಜಿಕ ಸೇವೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಮುಂದಿನ ಐದು ವರ್ಷಗಳಲ್ಲಿ 100 ಮನೆಗಳನ್ನು ಆರ್ಥಿಕ ಅಶಕ್ತರಿಗೆ ನಿರ್ಮಿಸಿಕೊಡುವ ಗುರಿಯನ್ನು ಟ್ರಸ್ಟ್ ಹೊಂದಿದೆ ಎಂದರು.
ಟ್ರಸ್ಟ್‌ನ ಉಪಾಧ್ಯಕ್ಷ ಹಾಲಾಡಿ ನಾಗಾರಾಜ್ ಶೆಟ್ಟಿ ಮಾತನಾಡಿ, ಹೆಗ್ಗುಂಜೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಟ್ರಸ್ಟ್‌ನ ಅಧ್ಯಕ್ಷರ ವಿವೇಚನೆಯಲ್ಲಿ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದು, ಬ್ರಹ್ಮಾವರದ ಸರಕಾರಿ ಪದವಿಪೂರ್ವ ಕಾಲೇಜಿನ ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಎಂದರು.
ಸರಕಾರಿ ಶಾಲೆಯನ್ನು ಖಾಸಗೀಕರಣ ಸಾಧ್ಯವಿಲ್ಲ:
ಈ ಸಂದರ್ಭ ಮಾತನಾಡಿದ ಟ್ರಸ್ಟ್‌ನ ಪ್ರತಿನಿಧಿ ಪಂಚಮಿ ಮೋಹನ ಶೆಟ್ಟಿ, ಸರಕಾರಿ ಶಾಲೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇದು ಎಂದಿಗೂ ಅಸಾಧ್ಯ. ಸರಕಾರಿ ಒಡಂಬಡಿಕೆ ಪ್ರಕಾರ ಹೆಗ್ಗುಂಜೆ ರಾಜೀವ ಶೆಟ್ಟಿಯವರ ಹೆಸರನ್ನು ಅಳವಡಿಸಲಾಗಿದೆ ಹೊರತು, ಸರಕಾರಿ ಶಾಲೆಯನ್ನು ಖರೀದಿಸಲು ಯಾರಿಂದಲೂ ಸಾಧ್ಯವಿಲ್ಲ. ಮುಂದೆಯೂ ಸರಕಾರದ ನಿಯಮ ಪ್ರಕಾರವೇ ಶಾಲೆ ನಡೆಯಲಿದೆ. ಟ್ರಸ್ಟ್ ಆಗಲಿ ಟ್ರಸ್ಟ್ ಪ್ರತಿನಿಧಿಗಳಾಗಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಈ ರೀತಿಯ ಅಪಪ್ರಚಾರ ಶಾಲೆಯ ಅಭಿವೃದ್ಧಿಗೆ ಮಾರಕ. ಖಾಸಗಿ ವ್ಯಕ್ತಿಗಳು ಸರಕಾರಿ ಶಾಲೆಯನ್ನು ಅಭಿವದ್ಧಿಪಡಿಸಲು ಹೋಗುವಾಗ ಅವರಿಗೆ ಈ ರೀತಿಯ ಅಪಪ್ರಚಾರಗಳು ಮುಂದೆ ಬರಲು ಹಿಂದೆ ಮುಂದೆ ನೋಡುವ ಸಾಧ್ಯತೆ ಇರುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ರವೀಂದ್ರ ಉಪಾಧ್ಯ, ರವಿಶೆಟ್ಟಿ ಕುಮ್ರಗೋಡು, ಹಾಲಾಡಿ ಗ್ರಾಮಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ, ಹೈಸ್ಕೂಲ್ ವಿಭಾಗದ ಶಿಕ್ಷಕ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.