ಡೈಲಿ ವಾರ್ತೆ:10/DEC/2024
ಕೋಟ: ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ – ಮೂವರ ವಿರುದ್ದ ಪ್ರಕರಣ ದಾಖಲು
ಕೋಟ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗುತ್ತಿದ್ದ ವಾಹನಗಳು ಪರಸ್ಪರ ತಾಗಿದವು ಎಂಬ ಕಾರಣವನ್ನೇ ಮುಂದೆ ಮಾಡಿ, ಹೆದ್ದಾರಿ ನಡುವಲ್ಲೇ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿಕೊಂಡು, ಪರಸ್ಪರ ಬೈದಾಡುತ್ತಾ ಹೊಯ್ ಕೈ ನಡೆಸಿ, ಸಾರ್ವಜನಿಕ ಶಾಂತಿಭಂಗವಾಗುವಂತೆ ಜಗಳಾಡುತ್ತಿದ್ದ ಮೂವರ ವಿರುದ್ಧ ಕೋಟ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಡಿ. 10 ರಂದು ಮಂಗಳವಾರ ಸಂಜೆ ಸುಮಾರು ಐದು ಗಂಟೆಯ ವೇಳೆಗೆ ಕೋಟ ರಾಷ್ಟ್ರೀಯ ಹೆದ್ದಾರಿಯಲ್ಲಿನ ಜಾಮೀಯಾ ಮಸೀದಿ ಎದುರು ಈ ಘಟನೆ ನಡೆದಿದ್ದು, ಭಯಭೀತ ಪ್ರತ್ಯಕ್ಷದರ್ಶಿಗಳು ಈ ಬಗ್ಗೆ ಕೋಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಾನ್ವಯ ಸ್ಥಳಕ್ಕಾಗಮಿಸಿದ ಕೋಟ ಠಾಣೆಯ ಕಾನೂನು – ಸುವ್ಯವಸ್ಥೆ ವಿಭಾಗದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ಸಿ, ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಘೋರ ಜಗಳಾಡಿ, ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ ಆರೋಪಿತರು ಮೊಹಮ್ಮದ್ ಇರ್ಷಾದ್ (25), ವಿನಾಯಕ ನಾಯಕ್(30) ಮತ್ತು ದಿನೇಶ ದೇವಾಡಿಗ(38) ಎಂಬ ಮೂವರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು, ಎರಡು ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ವಾಹನ – ಜನ ದಟ್ಟಣೆ ಇರುವಲ್ಲಿ ವಾಹನಗಳವರು ಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸಬೇಕು. ಸಮಸ್ಯೆಗಳುಂಟಾದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕಲ್ಲದೆ, ಕಾನೂನು ಕೈಗೆತ್ತಿಕೊಂಡು ಸಾರ್ವಜನಿಕರು ಮತ್ತು ಆಸ್ತಿಪಾಸ್ತಿಗಳಿಗೆ ನಷ್ಟ ಉಂಟುಮಾಡಿದಲ್ಲಿ ಅಥವಾ ಹೆದ್ದಾರಿಯಲ್ಲಿ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೋಟ ಠಾಣಾಧಿಕಾರಿ ರಾಘವೇಂದ್ರ ಸಿ ಈ ಬಗ್ಗೆ ಎಚ್ಚರಿಸಿದ್ದಾರೆ.