ಡೈಲಿ ವಾರ್ತೆ:11/DEC/2024
ಮುರ್ಡೇಶ್ವರ ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದ ಮೂವರು ವಿದ್ಯಾರ್ಥಿನಿಯರ ಶವ ಪತ್ತೆ
ಭಟ್ಕಳ: ಮುರುಡೇಶ್ವರ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದ ಮೂವರು ವಿದ್ಯಾರ್ಥಿನಿಯರ ಶವ ಪತ್ತೆಯಾಗಿದ್ದು, ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಬೋಟ್ ಮೂಲಕ ಮೂವರ ಮೃತ ದೇಹವನ್ನು ಹೊರತೆಗೆದಿದ್ದಾರೆ.
ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗಿದ್ದ 15 ವರ್ಷದ ದೀಕ್ಷಾ, ಲಾವಣ್ಯ, ವಂದನಾ ಎಂಬ ಮೂವರು ವಿದ್ಯಾರ್ಥಿನಿಯರು ಇದೀಗ ಶವವಾಗಿ ಪತ್ತೆಯಾಗಿದ್ದಾರೆ.
ನಿನ್ನೆ ಓರ್ವ ವಿದ್ಯಾರ್ಥಿನಿ ಶ್ರವಂತಿ (15) ಶವ ಪತ್ತೆಯಾಗಿತ್ತು.
ನೀರಿನಲ್ಲಿ ಕೊಚ್ಚಿ ಹೋಗಿದ್ದ ಉಳಿದ ಮೂವರು ವಿದ್ಯಾರ್ಥಿನಿಯರಿಗಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಇದೀಗ ಮೂವರು ವಿದ್ಯಾರ್ಥಿನಿಯರ ಶವವನ್ನು ಸಮುದ್ರದಿಂದ ಹೊರತೆಗೆಯಲಾಗಿದೆ.
ಪ್ರವಾಸೋದ್ಯಮ ಇಲಾಖೆಯಿಂದ ಲೈಫ್ ಗಾರ್ಡ್ ಸಿಬ್ಬಂದಿಗಳಿಗೆ ತುರ್ತು ಸಂದರ್ಭದಲ್ಲಿ ಅಗತ್ಯ ಇರುವ ಜೀವ ರಕ್ಷಕ ಸಾಮಗ್ರಿಗಳು ಇಲ್ಲಿಯ ತನಕ ನೀಡದೆ ಇರುವುದರಿಂದ ಸಕಾಲದಲ್ಲಿ ಜೀವ ರಕ್ಷಣೆ ಮಾಡಲು ವಿಫಲರಾಗಿರುತ್ತಾರೆ. ಅಲ್ಲದೆ ನುರಿತ ತರಬೇತಿ ಪಡೆದ ಸಿಬ್ಬಂದಿಗಳಲ್ಲದೆ ಇರುವುದು ಜೀವ ರಕ್ಷಣೆ ಮಾಡಲು ಅಸಮರ್ಥರಾಗಿರುತ್ತಾರೆ ಎಂದು ಸ್ಥಳೀಯರು ದೂರಿಕೊಂಡಿರುತ್ತಾರೆ.
ಈ ಮೊದಲಿನಂತೆ ಜಲ ಸಾಹಸ ಕ್ರೀಡೆಗಳಿದಿದ್ದರೆ ಅವರ ಜೀವ ರಕ್ಷಣೆ ಮಾಡಬಹುದಿತ್ತು. ಅಲ್ಲದೆ ಈ ಮೊದಲು ಆದೆಷ್ಟೋ ಜೀವ ರಕ್ಷಣೆ ಮಾಡಿದ ಉದಾಹರಣೆ ಇದೆ ಎಂದು ಸ್ಥಳೀಯ ನಿವಾಸಿ ಸತೀಶ್ ಖಾರ್ವಿ ಡೈಲಿ ವಾರ್ತೆ ತಂಡಕ್ಕೆ ತಿಳಿಸಿರುತ್ತಾರೆ.