ಡೈಲಿ ವಾರ್ತೆ: ಮಾ./06/2026

ಸತ್ತಿದ್ದ ವ್ಯಕ್ತಿ ಮತ್ತೆ ಜೀವಂತ: ಅಂತ್ಯಕ್ರಿಯೆಗೆ ಕರೆದೊಯ್ಯುವಾಗ ಮಾತಾಡಿದ್ದನ್ನು ಕಂಡು ಮನೆಯವರೇ ಶಾಕ್

ಬಾಗಲಕೋಟೆ: ಸತ್ತಿದ್ದಾರೆ ಎಂದು ವೈದ್ಯರು ಘೋಷಿಸಿದ್ದ ವ್ಯಕ್ತಿಯೊಬ್ಬರು ಅಂತಿಮ ಸಂಸ್ಕಾರಕ್ಕೆ ಕರೆದೊಯ್ಯುವಾಗ ಮಧ್ಯೆ ದಾರಿಯಲ್ಲೇ ಉಸಿರಾಡಿ ಮಾತನಾಡಿದ ಅಚ್ಚರಿ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ನಡೆದಿದೆ.

ಜಮಖಂಡಿಯ ಮೊಮಿನ್ ಗಲ್ಲಿಯ ನಿವಾಸಿಯಾಗಿರುವ 65 ವರ್ಷದ ಮುಬಾರಕ್ ಅವಟಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು.

ಇದರಿಂದ ದುಃಖಿತಗೊಂಡ ಕುಟುಂಬದವರು ಅಂತಿಮ ಸಂಸ್ಕಾರಕ್ಕಾಗಿ ಮುಬಾರಕ್ ಅವರ ದೇಹವನ್ನು ಊರಿಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಲೋಕಾಪುರ ಸಮೀಪ ರಸ್ತೆ ಹಂಪ್ಸ್ ಮೇಲೆ ವಾಹನ ಅಲುಗಾಡುತ್ತಿದ್ದಾಗ, ಅಚ್ಚರಿಯ ರೀತಿಯಲ್ಲಿ ಮುಬಾರಕ್ ಅವಟಿ ಉಸಿರಾಡಲು ಪ್ರಾರಂಭಿಸಿ ಕುಟುಂಬಸ್ಥರ ಜೊತೆ ಮಾತನಾಡಿದ್ದಾರೆ.

ಈ ದೃಶ್ಯವನ್ನು ಕಂಡ ಕುಟುಂಬಸ್ಥರು ಮೊದಲಿಗೆ ಬೆಚ್ಚಿಬಿದ್ದಿದ್ದು, ತಕ್ಷಣವೇ ಅವರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮೃತರಾದರೆಂದು ಭಾವಿಸಿದ್ದ ವ್ಯಕ್ತಿ ಮತ್ತೆ ಜೀವಂತವಾಗಿ ಮಾತನಾಡಿದ ಘಟನೆ ಜಮಖಂಡಿ ಪ್ರದೇಶದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಜನರಲ್ಲಿ ಆಶ್ಚರ್ಯ ಮೂಡಿಸಿದೆ.