

ಡೈಲಿ ವಾರ್ತೆ: ಮಾ./06/2026

ಭಟ್ಕಳ: 18 ವರ್ಷದ ವಿದ್ಯಾರ್ಥಿ ನೇಣಿಗೆ ಶರಣು

ಭಟ್ಕಳ: ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊನ್ನೇಗದ್ದೆಯಲ್ಲಿ ಹದಿನೆಂಟು ವರ್ಷದ ಯುವಕನೋರ್ವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನ ಕಲಕುವ ಘಟನೆ ಶುಕ್ರವಾರ ಸಂಭವಿಸಿದೆ.
ಮೃತ ಯುವಕನನ್ನು ಸ್ಥಳೀಯ ನಿವಾಸಿ, ಕೌಶಿಕ್ ಸುಬ್ರಾಯ ನಾಯ್ಕ(18) ಎಂದು ಗುರುತಿಸಲಾಗಿದೆ.
ಕೌಶಿಕ್ ಓದಿನಲ್ಲಿ ಮುಂದಿದ್ದ ವಿದ್ಯಾರ್ಥಿಯಾಗಿದ್ದು, ಉತ್ತಮ ಭವಿಷ್ಯದ ಕನಸು ಕಂಡಿದ್ದ ಎನ್ನಲಾಗಿದೆ. ಈತನ ತಂದೆ ಸುಬ್ರಾಯ ಬರವಯ್ಯ ನಾಯ್ಕ ಅವರು ಕೂಲಿ ಕಾರ್ಮಿಕರಾಗಿದ್ದು, ಮಗನಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಹಂಬಲ ಹೊಂದಿದ್ದರು. ಆದರೆ ಮಗನ ಈ ಅಚಾತುರ್ಯದ ನಿರ್ಧಾರದಿಂದ ಇಡೀ ಕುಟುಂಬ ಕಂಗಾಲಾಗಿದೆ.
ಶುಕ್ರವಾರ ಬೆಳಿಗ್ಗೆ ಮನೆಯ ಕೋಣೆಯಲ್ಲಿ ಯಾರೂ ಇಲ್ಲದ ವೇಳೆ ಕೌಶಿಕ್ ಅವರು ಬಟ್ಟೆಯ ಸಹಾಯದಿಂದ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ. ಕುಟುಂಬದವರು ಗಮನಿಸುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಘಟನೆಯ ಕುರಿತು ಮೃತನ ತಂದೆ ಸುಬ್ರಾಯ ನಾಯ್ಕ ಅವರು ನೀಡಿದ ದೂರಿನ ಮೇರೆಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.