ಡೈಲಿ ವಾರ್ತೆ:23/DEC/2024
ಬಿ.ಸಿ. ರೋಡ್: ಕ್ಷುಲ್ಲಕ ವಿಚಾರಕ್ಕೆ ಎರಡು ತಂಡಗಳ ನಡುವೆ ಗಲಾಟೆ – ದೂರ-ಪ್ರತಿದೂರು, ಇಬ್ಬರು ಆರೋಪಿಗಳ ಬಂಧನ
ಬಂಟ್ವಾಳ : ಬಿ.ಸಿ.ರೋಡಿನ ಕೈಕಂಬ ಪರ್ಲಿಯಾದಲ್ಲಿ ಬಾಡಿಗೆ ಕೊಡುವ ವಿಚಾರದಲ್ಲಿ ಎರಡು ತಂಡಗಳ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸರು ಎರಡೂ ತಂಡಗಳ ತಲಾ ಒಬ್ಬೊಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಗಲಾಟೆಗೆ ಸಂಬಂಧಿಸಿ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ನೀಡಿದ್ದು ಎರಡೂ ಕಡೆಯ ಪ್ರಕರಣ ದಾಖಲಾಗಿತ್ತು.
ಪರ್ಲಿಯಾ ಮದ್ದ ಮನೆ ನಿವಾಸಿ ಶಾಹುಲ್ ಹಮೀದ್ ಹಾಗೂ ತಾರಿಪಡ್ಪು ನಿವಾಸಿ ಹಸೈನಾರ್ ಬಂಧಿತ ಆರೋಪಿಗಳು. ಇವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಇವರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮನೆಯ ಅಂಗಳದಲ್ಲಿ ಎರಡು ತಂಡಗಳ ನಡುವೆ ಗಲಾಟೆಯ ವಿಡಿಯೋ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈಯಕ್ತಿಕ ವಿಚಾರದಲ್ಲಿ ಆರಂಭವಾದ ಗಲಾಟೆ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಎಸ್.ಡಿ.ಪಿ.ಐ.ಮತ್ತು ಕಾಂಗ್ರೆಸ್ ಪಕ್ಷದ ಅಂಗಳದಲ್ಲಿ ಮಾತಿನ ಫೈರಿಂಗ್ ಆರಂಭವಾಗಿತ್ತು. ಪ್ರಕರಣದ ಕುರಿತಂತೆ ಎಸ್.ಡಿ.ಪಿ.ರಾಜ್ಯಾಧ್ಯಕ್ಷ ಮಂಗಳೂರಿಗೆ ಆಗಮಿಸಿದ್ದು ಘಟನೆಯಲ್ಲಿ ಗಾಯವಾಗಿರುವ ಆರೋಪಿಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಲ್ಲದೆ, ಕಾಂಗ್ರೆಸ್ ವಿರುಧ್ದ ಮತ್ತು ಗಾಂಜಾ ಕುರಿತಾಗಿ ಹೇಳಿಕೆಯನ್ನು ನೀಡಿದ್ದರು.
ಆರೋಪಿಗಳಾದ ಹಸೈನಾರ್ ತಾಳಿಪಡ್ಪು, ರಫೀಕ್ ತಪಟ್ಟಿ ಬಂಟ್ವಾಳ , ಜಸೀಲ್ ತಲಪಾಡಿ
ಅಫೀಝ್ ತಲಪಾಡಿ , ರಿಯಾಜ್ ಕುಮೇರು , ಶಮೀರ್ ಚಮ್ಮಿ , ನೌಫಾಲ್ ಮಾರಿಪಲ್ಲ , ನೌಫಾಲ್ ಬಿನ್ ಬಸೀರ್ ಬಲ್ಬು , ತುಫೈಲ್ ಬಂದರ್, ಸಮದ್ ತಾಳಿಪಡ್ಪು ಹಾಗೂ ಅಪರಿಚಿತರು 15 ಮಂದಿ ಅಕ್ರಮ ಕೂಟ ಕಟ್ಟಿಕೊಂಡು ಶಸ್ತ್ರಾಸ್ತ್ರ ಗಳೊಂದಿಗೆ ಶಾಹುಲ್ ಹಮೀದ್ ಅವರ ಮನೆಗೆ ನುಗ್ಗಿ ಗರ್ಭಿಣಿ ಮೇಲೆ ಹಲ್ಲೆ ಹಾಗೂ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದಲ್ಲದೆ, ಶಾಹುಲ್ ಹಮೀದ್ ಅವರ ಪತ್ನಿ, ಮಕ್ಕಳಾದ ಸಮೀರ್, ಶಫೀಕ್, ಸಫ್ವಾನ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಮನೆಯಲ್ಲಿದ್ದ ಶಾಹುಲ್ ಹಮೀದ್ ಅವರ ಮಗಳಾದ ಗರ್ಭಿಣಿ ಶಬೀರಳನ್ನು ದೂಡಿ ಹಾಕಿ ಹೊಟ್ಟೆಗೆ ಹಲ್ಲೆ ಮಾಡಿದ್ದಲ್ಲದೆ ಮತ್ತೊಬ್ಬಳು ಅಪ್ರಾಪ್ತ ಮಗಳಿಗೆ ಕಿರುಕುಳ ನೀಡಿದ್ದಲ್ಲದೆ ಕುತ್ತಿಗೆಯಲ್ಲಿದ್ದ ಎರಡು ಪವನ್ ಚಿನ್ನದ ಸರವನ್ನು ಎಳೆದುಕೊಂಡು ಹೋಗಿದ್ದಾರೆ. ಜೊತೆಗೆ ಶಾಹುಲ್ ಅವರ ಪತ್ಮಿಗೂ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಅಪ್ರಾಪ್ತ ಬಾಲಕಿ ಮೇಲೆ ದೌರ್ಜನ್ಯ ವೆಸಗಿದ ಗ್ಯಾಂಗ್ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಹಾಗೂ ಟೇಬಲ್ ಮೇಲಿದ್ದ ರೂ 30 ಸಾವಿರ ಹಣವನ್ನು ದರೋಡೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದರು.
ಇದಕ್ಕೆ ಪ್ರತಿಯಾಗಿ ಮಹಮ್ಮದ್ ಇರ್ಫಾನ್ ಎಂಬಾತ ದೂರು ನೀಡಿದ್ದು, ಎಸ್.ಎಚ್. ಶಾಹುಲ್ , ಸಮೀರ್, ಸಫ್ವಾನ್, ಶಫೀಕ್ ಎಂಬ ಆರೋಪಿಗಳು ಮಹಮ್ಮದ್ ಇರ್ಫಾನ್ , ಮೊಹಮ್ಮದ್ ಅಲ್ಮಸ್, ಮೊಹಮ್ಮದ್ ರಫೀಕ್, ಹಸೈನಾರ್ ಎಂಬವರ ಮೇಲೆ ಕೊಲೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಲ್ಲದೆ ರೂ.5 ಸಾವಿರವನ್ನು ದೋಚಿಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದರು.
ಈ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.