


ಡೈಲಿ ವಾರ್ತೆ: 07/ಮಾರ್ಚ್ /2025


ಉಡುಪಿ |ಉಡುಪಿಯ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ – ‘ಜೀವಂತ ಶವ ಯಾತ್ರೆ’ ನಡೆಸಿ ಆಕ್ರೋಶ ಹೊರಹಾಕಿದ ನಾಗರಿಕರು!

ಉಡುಪಿಯ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬವಾಗುತ್ತಿರುವ ಕಾರಣ ಜನರು ಪ್ರತಿದಿನ ಸಮಸ್ಯೆ ಅನುಭವಿಸುವಂತಾಗಿದೆ. ಇದನ್ನು ಖಂಡಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ವಿಭಿನ್ನ ಪ್ರತಿಭಟನೆ ನಡೆಸಿದೆ.
‘ಜೀವಂತ ಶವ ಯಾತ್ರೆ’ ಎಂಬ ವಿಭಿನ್ನ ಪ್ರತಿಭಟನೆ ಮೂಲಕ ಕೇಂದ್ರ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅಪಹಾಸ್ಯ ಮಾಡಿ ಪ್ರತಿಭಟನೆ ನಡೆಸಿದರು.

ನಿತ್ಯಾನಂದ ಒಳಕಾಡು ತಾನೇ ಶವದಂತೆ ಚಟ್ಟದ ಮೇಲೆ ಮಲಗಿದರೆ, ನಾಗರಿಕ ಸಮಿತಿಯ ಕಾರ್ಯಕರ್ತರು ಶವಯಾತ್ರೆ ನಡೆಸಿದರು.
ಇಂದ್ರಾಳಿ ಇಂಗ್ಲೀಷ್ ಮೀಡಿಯಂ ಶಾಲೆಯ ಮುಂಭಾಗದಿಂದ ಪ್ರತಿಭಟನೆ ಆರಂಭವಾಯ್ತು.
ನೂತನ ರೈಲ್ವೆ ಸೇತುವೆ ಕೆಳಭಾಗದಲ್ಲಿ ಚಟ್ಟವನ್ನಿರಿಸಿ ಧಿಕ್ಕಾರ ಕೂಗಿದರು. ನಂತರ ಅಣಕು ಶವಯಾತ್ರೆಯನ್ನು ಇಂದ್ರಾಳಿ ಹಿಂದು ರುದ್ರ ಭೂಮಿಯವರೆಗೆ ತೆಗೆದುಕೊಂಡು ಹೋಗಲಾಯಿತು. ಈ ಮೂಲಕ ವ್ಯವಸ್ಥೆಯ ವಿರುದ್ಧ ನಾಗರಿಕ ಸಮಿತಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದೆ.
ಜನವರಿ 15ರಂದು ರೈಲ್ವೆ ಬ್ರಿಜ್ ಪೂರ್ಣಗೊಳ್ಳುತ್ತದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿಗಳು ಭರವಸೆ ಕೊಟ್ಟಿದ್ದರು. ಎರಡು ಭಾಗದಲ್ಲಿ ರಸ್ತೆ ನಿರ್ಮಾಣವಾಗಿ ಏಳು ವರ್ಷ ಕಳೆದರೂ ರೈಲ್ವೆ ಸೇತುವೆ ಪೂರ್ಣವಾಗಿಲ್ಲ.

ಈ ಸಂದರ್ಭದಲ್ಲಿ ಮಾತನಾಡಿದ ನಿತ್ಯಾನಂದ ಒಳಕಾಡು,
ಉಡುಪಿ ಜಿಲ್ಲಾ ನಾಗರಿಕ ಸಮಿತಿ ಜೀವಂತ ಶವ ಪ್ರತಿಭಟನೆ ಮಾಡಿದೆ. ರೈಲ್ವೆ ಬ್ರಿಡ್ಜ್ ನ ನಿಧಾನಗತಿಯ ಕಾಮಗಾರಿಯಿಂದ ಈ ರಸ್ತೆಯಲ್ಲಿ ಓಡಾಡುವವರು ಜೀವಂತ ಶವಾಗುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಈ ರಸ್ತೆಯಲ್ಲಿ ಓಡಾಡುವ ಅಧಿಕಾರಿಗಳಿಗೆ ಈ ವಿಚಾರ ತಿಳಿಯಬೇಕು ಎಂದು ಈ ಪ್ರತಿಭಟನೆ ಮಾಡಿದ್ದೇನೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರು ಆಸ್ಪತ್ರೆ ಓಡಾಟ ಮಾಡುವವರು ಪ್ರತಿದಿನ ನರಕ ಯಾತನೆ ಅನುಭವಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಈ ಸಮಸ್ಯೆ ತಲುಪಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ವಿನಯ ಚಂದ್ರ ಮಾತನಾಡಿ,
ಮಣಿಪಾಲ ಮತ್ತು ಉಡುಪಿಯಲ್ಲಿ ಬಹಳ ಆಸ್ಪತ್ರೆಗಳಿಗೆ. ಈ ದಾರಿಯಲ್ಲಿ ಬಹಳ ಆಂಬುಲೆನ್ಸ್ ಗಳು ಓಡಾಡುತ್ತದೆ. ಇಂದ್ರಾಳಿ ರೈಲ್ವೆ ಸ್ಟೇಷನ್ ಇದೆ. ಪ್ರತಿದಿನ ಸಾವಿರಾರು ಜನ ರಸ್ತೆಯಲ್ಲಿ ಓಡಾಡುತ್ತಾರೆ. ಮಕ್ಕಳಿಗೆ ಹಿರಿಯರಿಗೆ ಸಾರ್ವಜನಿಕರಿಗೆ ಬಹಳ ಸಮಸ್ಯೆ ಆಗಿದೆ. ಈ ಮಳೆಗಾಲ ಆರಂಭವಾಗುವ ಮೊದಲೇ ಬ್ರಿಡ್ಜ್ ಕಾಮಗಾರಿ ಪೂರ್ಣಗೊಂಡು ಜನರ ಓಡಾಟಕ್ಕೆ ಉಪಯೋಗ ಆಗಬೇಕು ಎಂದು ಒತ್ತಾಯಿಸಿದರು.
ಒಟ್ಟು 13ಕೋಟಿ ರೂಪಾಯಿ ವೆಚ್ಚದ 58 ಮೀಟರ್ ಉದ್ದದ ಇಂದ್ರಾಳಿ ರೈಲ್ವೆ ಮೇಲ್ಸೇತುವೆಯನ್ನು 2018ರಲ್ಲಿ ಆರಂಭಿಸ ಲಾಗಿದ್ದು, ಇದೀಗ ಗರ್ಡರ್ ಗಳನ್ನು ಜೋಡಿಸುವ ಕೆಲಸ ನಡೆಯುತ್ತಿದೆ. ಆರಂಭಿಕ ಯೋಜನೆ ವೆಚ್ಚಕ್ಕಿಂತ ಆನಂತರ ಕಾಮಗಾರಿ ವೆಚ್ಚ ಹೆಚ್ಚಾಗಿರುವ ಕಾರಣ ಕೊಂಕಣ ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಧ್ಯೆ ಸಮನ್ವಯದ ಕೊರತೆ ಏರ್ಪಟ್ಟಿತ್ತು.