



ಡೈಲಿ ವಾರ್ತೆ: 14/ಅ./2025

ಅ.19 ರಂದು ಸಾಲಿಗ್ರಾಮ ಮಕ್ಕಳ ಮೇಳದ 50ರ ಸಂಭ್ರಮದ ಸುವರ್ಣ ಪರ್ವ ಸಮಾರೋಪ ಸಮಾರಂಭ

ಕೋಟ: ಯಕ್ಷಗಾನ ಚರಿತ್ರೆಯಲ್ಲಿ ಐತಿಹಾಸಿಕ ದಾಖಲೆಯನ್ನು ಮಾಡಿದ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ 50ರ ಸಂಭ್ರಮದ ಸುವರ್ಣ ಪರ್ವ ಸಮಾರೋಪ ಸಮಾರಂಭವು ಅಕ್ಟೋಬರ್ 19 ಆದಿತ್ಯವಾರದಂದು ಮಧ್ಯಾಹ್ನ 2ಕ್ಕೆ ಕೋಟ ವಿವೇಕ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ.
ಕರ್ನಾಟಕ ಸರ್ಕಾರ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್ ಅವರ ಅಧ್ಯಕ್ಷತೆಯಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅಭ್ಯಾಗತರಾಗಿ ಮಾನ್ಯ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು, ಮಾಜಿ ಸಚಿವರಾದ ಕೆ ಜಯಪ್ರಕಾಶ್ ಹೆಗ್ಡೆ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಇದರ ಪ್ರವರ್ತಕರಾದ ನಾಡೋಜ ಜಿ ಶಂಕರ್, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಡಾ. ಎಂ ಮೋಹನ್ ಆಳ್ವ, ಬಹುಶ್ರುತ ವಿದ್ವಾಂಸರು ಡಾ. ಎಂ ಪ್ರಭಾಕರ ಜೋಶಿ, ಗೀತಾನಂದ ಪೌಂಡೇಶನ್ ಇದರ ಪ್ರವರ್ತಕರಾಗಿರುವ ಆನಂದ ಸಿ. ಕುಂದರ್, ವಿವೇಕ ವಿದ್ಯಾಸಂಸ್ಥೆಗಳ ಅಧ್ಯಕ್ಷರಾಗಿರುವ ಪ್ರಭಾಕರ ಮಯ್ಯ ಭಾಗವಹಿಸಲಿದ್ದಾರೆ.
ಸ್ಥಾಪಕ ನಿರ್ದೇಶಕರಾದ ಎಚ್ ಶ್ರೀಧರ ಹಂದೆ ಗೌರವ ಉಪಸ್ಥಿತರಿರಲಿದ್ದಾರೆ. ಯಕ್ಷಗಾನ ಶಿಕ್ಷಕರಾಗಿರುವ ಚೇರ್ಕಾಡಿ ಮಂಜುನಾಥ್ ಪ್ರಭು, ಎನ್. ಉದಯಕುಮಾರ ಮಧ್ಯಸ್ಥ, ಹೆಮ್ಮಾಡಿ ಪ್ರಭಾಕರ್ ಆಚಾರ್ಯ ಇವರುಗಳಿಗೆ ಸುವರ್ಣ ಪರ್ವ ಗೌರವ ಪುರಸ್ಕಾರವನ್ನು ಪ್ರಧಾನಿಸಲಾಗುವುದು. ಅಂತೆಯೇ ಮಕ್ಕಳ ಮೇಳದಲ್ಲಿ ಪ್ರಾಕ್ತನ ಕಲಾವಿದರಾಗಿದ್ದು, ಇದೀಗ ಯಕ್ಷಗಾನ ಶಿಕ್ಷಕರಾಗಿ ಗುರುತಿಸಿಕೊಂಡ ಬೆಂಗಳೂರಿನ ಮನೋಜ್ ಭಟ್ ಹಾಗೂ ನವೀನ್ ಮಣೂರ್ ಅವರಿಗೆ ಸುವರ್ಣ ಯುವ ಪುರಸ್ಕಾರವನ್ನು ನೀಡಲಾಗುವುದು.
ಮಕ್ಕಳ ಮೇಳದ ಪ್ರಾಕ್ತನ ವಿದ್ಯಾರ್ಥಿಗಳಿಂದ ತಾಮ್ರಧ್ವಜ ಕಾಳಗ ಹಾಗೂ ಅತಿಥಿ ಕಲಾವಿದರಿಂದ ಸುಧನ್ವ ಮೋಕ್ಷ ಯಕ್ಷಗಾನ ಪ್ರಸಂಗದ ಪ್ರದರ್ಶನವಿದೆ ಎಂದು ಮಕ್ಕಳ ಮೇಳದ ಕಾರ್ಯದರ್ಶಿ ಹೆಚ್ ಸುಜಯೀಂದ್ರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.