


ಡೈಲಿ ವಾರ್ತೆ: 17/ಮಾರ್ಚ್ /2025


‘ನೇಜಾ ಮೇಳ’ಕ್ಕೆ ಈ ಬಾರಿ ಬ್ರೇಕ್| ‘ದೇವಸ್ಥಾನಗಳ ಲೂಟಿಕೋರನ ಹೆಸರಲ್ಲಿ ಉತ್ಸವ ನಡೆಸಲು ಬಿಡಲ್ಲ’ ಎಂದ ಸಂಭಾಲ್ ಪೊಲೀಸ್. ಏನಿದು ‘ಮೇಳ’?

ಸಂಭಾಲ್: ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಪ್ರತಿ ವರ್ಷ ಸೈಯ್ಯದ್ ಸಲಾರ್ ಮಸೂದ್ ಘಾಜಿ ಸ್ಮರಣಾರ್ಥ ನಡೆಯುತ್ತಿದ್ದ ‘ನೇಜಾ ಮೇಳ’ ಕ್ಕೆ ಈ ಬಾರಿ ಬ್ರೇಕ್ ಬಿದ್ದಿದೆ.
ಹೌದು.. ದೇವಸ್ಥಾನಗಳ ಲೂಟಿ ಕೋರನ ಹೆಸರಲ್ಲಿ ಉತ್ಸವ ನಡೆಸಲು ಬಿಡಲ್ಲ..’ ದರೋಡೆಕೋರರ’ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸಂಭಾಲ್ ಪೊಲೀಸರು ಆಯೋಜಕರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಸಂಭಾಲ್‌ನಲ್ಲಿ ಪ್ರತಿ ವರ್ಷ ಸೈಯ್ಯದ್ ಸಲಾರ್ ಮಸೂದ್ ಘಾಜಿ ಸ್ಮರಣಾರ್ಥ ‘ನೇಜಾ ಮೇಳ’ ಆಯೋಜನೆ ಕುರಿತು ಆಯೋಕರು ಸಂಭಾಲ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ಚಂದ್ರ ಅವರನ್ನು ಭೇಟಿಯಾಗಿ ಚರ್ಚಿಸಿದರು. ಈ ವೇಳೆ ಪ್ರತೀ ವರ್ಷದಂತೆ ಈ ವರ್ಷವೂ ನೇಜಾ ಮೇಳ ಆಯೋಜನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪೊಲೀಸ್ ಇಲಾಖೆಯ ಅನುಮತಿ ಬೇಕು ಎಂದು ಕೇಳಿದಾಗ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ಚಂದ್ರ ಅವರು ಅನುಮತಿ ನಿರಾಕರಿಸಿದ್ದಾರೆ.
ಅಲ್ಲದೆ ದೇವಸ್ಥಾನಗಳ ಲೂಟಿ ಕೋರನ ಹೆಸರಲ್ಲಿ ಉತ್ಸವ ನಡೆಸಲು ಬಿಡುವುದಿಲ್ಲ. ಒಂದು ವೇಳೆ ಕಾನೂನು ಮೀರಿ ಉತ್ಸವ ನಡೆಸಿದರೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

‘ಅಬ್ದುಲ್ ಸಲಾರ್ ಮಸೂದ್ ಘಾಜಿ ಅವರ ಸ್ಮರಣಾರ್ಥ ಈ ಮೇಳವನ್ನು ನಡೆಸಲಾಗುತ್ತಿದೆ. ನಿಮಗೆ ಇತಿಹಾಸ ತಿಳಿದಿದ್ದರೆ ಈ ಘಾಜಿ ಸಲಾರ್ ಸೋಮನಾಥ ದೇವಾಲಯವನ್ನು ಲೂಟಿ ಮಾಡಿದ. ಅನೇಕ ದೇವಾಲಯಗಳನ್ನು ನಾಶಪಡಿಸಿದ ಮತ್ತು ಹಲವಾರು ಕೊಲೆಗಳಿಗೆ ಕಾರಣನಾದ ದರೋಡೆಕೋರ ಈತ. ಇಂತಹ ವ್ಯಕ್ತಿಯ ಸ್ಮರಣಾರ್ಥ ಕಾರ್ಯಕ್ರಮವನ್ನು ಆಯೋಜಿಸುವುದು ಸೂಕ್ತವಲ್ಲ. ದರೋಡೆಕೋರ ಮತ್ತು ಕೊಲೆಗಾರನನ್ನು ಸ್ಮರಿಸುವುದು ಸರಿಯಲ್ಲ. ಹೀಗಾಗಿ ನೇಜಾ ಮೇಳಕ್ಕೆ ಅನುಮತಿ ನಿರಾಕರಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ಚಂದ್ರ ಹೇಳಿದರು.
ಉತ್ಸವ ನಡೆಸಿದರೆ ಕ್ರಮ:
ಅಂತೆಯೇ ಸರ್ಕಾರದ ನಿರ್ಣಯ ಮೀರಿ ಅಂತಹ ಕಾರ್ಯಕ್ರಮ ನಡೆಸಿದರೆ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಕಾರ್ಯಕ್ರಮದ ಕುರಿತು ತಪ್ಪು ಮಾಹಿತಿ ಹರಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ವರ್ಷಗಳಿಂದ ನಡೆಯುತ್ತಿರುವ ಹಾನಿಕಾರಕ ಸಂಪ್ರದಾಯ ಬದಲಾಯಿಸುವುದು ಮುಖ್ಯ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಏನಿದು ‘ನೇಜಾ ಮೇಳ’?
ಸೋಮನಾಥ ದೇವಾಲಯವನ್ನು ಲೂಟಿ ಮಾಡಿದ್ದ ಮಹ್ಮದ್ ಘಜ್ನವಿಯ ಸೋದರಳಿಯನೇ ಈ ಸೈಯ್ಯದ್ ಸಲಾರ್ ಮಸೂದ್ ಘಾಜಿ. ಇದೇ ಘಾಜಿಯ ಸ್ಮರಣಾರ್ಥ ಉತ್ತರ ಭಾರತದಲ್ಲಿ ಪ್ರತೀ ವರ್ಷ ‘ನೇಜಾಮೇಳ’ ಆಯೋಜಿಸಲಾಗುತ್ತದೆ. ಹೋಳಿ ಹಬ್ಬದ ನಂತರದ ಮೊದಲ ಮಂಗಳವಾರ ಮೇಳದ ಮೈದಾನದಲ್ಲಿ 30 ಅಡಿ ಎತ್ತರದ ಕಂಬವನ್ನು ಸ್ಥಾಪಿಸುವುದರೊಂದಿಗೆ ಈ ನೇಜಾಮೇಳವು ಸಾಮಾನ್ಯವಾಗಿ ಪ್ರಾರಂಭವಾಗುತ್ತದೆ. ಅಂದರೆ ಈ ಕಂಬವನ್ನು ಮಾರ್ಚ್ 18 ರಂದು ಸ್ಥಾಪಿಸಬೇಕಿತ್ತು, ಆದರೆ ಪೊಲೀಸ್ ಅನುಮತಿ ನಿರಾಕರಣೆಯಿಂದ ಅದು ನಿಂತಿದೆ.