

ಡೈಲಿ ವಾರ್ತೆ: ಫೆ./26/2026

ಸಕಲೇಶಪುರದಲ್ಲಿ ವಿಚಿತ್ರ ಘಟನೆ: 9 ರೂ. 34 ಪೈಸೆ ಬಾಕಿಗೆ ಬ್ಯಾಂಕ್ ಕರೆ: 66 ಪೈಸೆಗಾಗಿ ರೈತನ ಪಟ್ಟು!

ಹಾಸನ: ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ವರ್ಷಗಳ ಹಿಂದೆ ಪಡೆದ ಸಾಲವನ್ನು ಸಂಪೂರ್ಣವಾಗಿ ಬಡ್ಡಿ ಸಮೇತ ತೆರವುಗೊಳಿಸಿದ್ದ ಕಾಫಿ ಬೆಳೆಗಾರ ಚೊಕ್ಕಣ್ಣಗೌಡ ಅವರಿಗೆ ಏಕಾಏಕಿ ಬ್ಯಾಂಕ್‌ನಿಂದ 9 ರೂಪಾಯಿ 34 ಪೈಸೆ ಬಾಕಿ ಇರುವುದಾಗಿ ಕರೆ ಬಂದಿದ್ದು, ಈ ಸಣ್ಣ ಮೊತ್ತವೇ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಚೊಕ್ಕಣ್ಣಗೌಡ ಅವರು ಕೆಲ ವರ್ಷಗಳ ಹಿಂದೆ ಕೆನರಾ ಬ್ಯಾಂಕ್‌ನಿಂದ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಆ ಸಾಲವನ್ನು ಸಂಪೂರ್ಣವಾಗಿ ಬಡ್ಡಿ ಸಮೇತ ತೀರಿಸಿದ್ದಾಗಿ ಅವರು ತಿಳಿಸಿದ್ದಾರೆ. ಆದರೆ ನಿನ್ನೆ ಬ್ಯಾಂಕ್ ಸಿಬ್ಬಂದಿಯಿಂದ 9 ರೂಪಾಯಿ 34 ಪೈಸೆ ಬಾಕಿ ಇರುವುದಾಗಿ ಕರೆ ಬಂದ ಹಿನ್ನೆಲೆಯಲ್ಲಿ ಅವರು ಸಕಲೇಶಪುರದ ಶಾಖೆಗೆ ತೆರಳಿ 10 ರೂಪಾಯಿ ನೀಡಿ ಬಾಕಿ ಸಾಲ ಕ್ಲಿಯರ್ ಮಾಡಿದ್ದಾರೆ.
ರೆಸಿಪ್ಟ್‌ನಲ್ಲಿ 9 ರೂಪಾಯಿ 34 ಪೈಸೆ ಎಂದು ಉಲ್ಲೇಖವಾಗಿರುವುದನ್ನು ಗಮನಿಸಿದ ಅವರು, “ಉಳಿದ 66 ಪೈಸೆ ವಾಪಸ್ ಕೊಡಿ” ಎಂದು ಪಟ್ಟು ಹಿಡಿದಿದ್ದಾರೆ.
ಸಾವಿರಾರು ಕೋಟಿ ಸಾಲ ಮಾಡಿ ಪರಾರಿಯಾದವರ ಬಗ್ಗೆ ಪ್ರಶ್ನೆ ಇಲ್ಲ, ಆದರೆ ಸಾಲವನ್ನು ಸಕಾಲದಲ್ಲಿ ತೀರಿಸುವ ಬಡ ರೈತರನ್ನು ಕಾಡುವುದು ನ್ಯಾಯವೇ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್ ಸಿಬ್ಬಂದಿ ಈ ಕರೆ ಕಂಪ್ಯೂಟರೈಸ್ಡ್ ಟೆಲಿಕಾಲ್ ವ್ಯವಸ್ಥೆಯಿಂದ ಆಗಿದ್ದು, ತಮ್ಮಿಂದ ಕರೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರೂ, ಪೈಸೆ ಲೆಕ್ಕದ ವಿಷಯವೇ ಪಟ್ಟಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ವಿಚಿತ್ರ ಘಟನೆಯಿಂದ ಸಕಲೇಶಪುರದ ಕೆನರಾ ಬ್ಯಾಂಕ್ ಶಾಖೆ ಸಾಕ್ಷಿಯಾಯಿತು. ಸಣ್ಣ ಮೊತ್ತದ ಬಾಕಿ ವಿಚಾರವೇ ದೊಡ್ಡ ಪ್ರಶ್ನೆಯನ್ನು ಎಬ್ಬಿಸಿದೆ. ನಿಯಮ ಪಾಲನೆ ಮುಖ್ಯವೇ? ಅಥವಾ ಮಾನವೀಯತೆ ಮುಖ್ಯವೇ?