ಡೈಲಿ ವಾರ್ತೆ: ಫೆ./26/2026

ಬೆಂಗಳೂರು| ₹1 ಕೋಟಿ ಮೌಲ್ಯದ ಎಂಡಿಎಂಎ ಸೀಜ್: ಅಂತರರಾಜ್ಯ ಡ್ರಗ್ ಜಾಲದ ಕಿಂಗ್‌ಪಿನ್ ಬಂಧನ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೇರಳ ಮಾದಕವಸ್ತು ವಿರೋಧಿ ವಿಶೇಷ ಕಾರ್ಯಪಡೆ ಭರ್ಜರಿ ಕಾರ್ಯಾಚರಣೆ ನಡೆಸಿ, ಅಂತರರಾಜ್ಯ ಡ್ರಗ್ ಜಾಲಕ್ಕೆ ಸಂಬಂಧಿಸಿದ ಕುಖ್ಯಾತ ಪೆಡ್ಲರ್‌ನನ್ನು ಬಂಧಿಸಿದೆ.

ಅಸ್ಸಾಂ ಮೂಲದ ಧೀರೇಶ್ ಕುಟುಮ್ (27) ಬಂಧಿತ ಆರೋಪಿ.
ಖಚಿತ ಮಾಹಿತಿಯ ಮೇರೆಗೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಮೈಲಸಂದ್ರದ ರಮೇಶ್ ರೆಡ್ಡಿ ಬಡಾವಣೆಯ ಮನೆಯೊಂದರ ಮೇಲೆ ದಾಳಿ ನಡೆಸಿದ ತಂಡ, ಸುಮಾರು ₹1 ಕೋಟಿ ಮೌಲ್ಯದ 2 ಕೆಜಿ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಂಡಿದೆ.

ದಾಳಿಯ ವೇಳೆ 2 ಕೆಜಿ ತೂಕದ ನಾಲ್ಕು ಪ್ಯಾಕೆಟ್‌ಗಳು ಹಾಗೂ 15 ಕ್ಕೂ ಹೆಚ್ಚು ಖಾಲಿ ಸೆರೆಲ್ಯಾಕ್ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಡ್ರಗ್ಸ್‌ಗಳನ್ನು ಸೆರೆಲ್ಯಾಕ್ ಪಾಕೆಟ್‌ಗಳಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿತ್ತು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಸ್ವಿಗ್ಗಿ ಮತ್ತು ಜೊಮ್ಯಾಟೊ ಡೆಲಿವರಿ ಬಾಯ್ ಮಾದರಿಯಲ್ಲಿ ಎಂಡಿಎಂಎ ಸರಬರಾಜು ಮಾಡಲಾಗುತ್ತಿದ್ದು, ನಗರದಲ್ಲಿ ಗುಪ್ತವಾಗಿ ವಿತರಣೆಯಾಗುತ್ತಿತ್ತು ಎಂದು ತಿಳಿದು ಬಂದಿದೆ.

ಸತ್ಯಜಿತ್ ನೇತೃತ್ವದ ಕೇರಳದ ವಿಶೇಷ ತಂಡ ಈ ದಾಳಿ ನಡೆಸಿದೆ. ವಾರದ ಹಿಂದೆ ಕೇರಳದ ಮಲ್ಲಪುರಂನಲ್ಲಿ 1 ಕೆಜಿ ಎಂಡಿಎಂಎ ಸಹಿತ 8 ಮಂದಿಯನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಕಿಂಗ್‌ಪಿನ್ ಧೀರೇಶ್ ಕುರಿತು ಮಹತ್ವದ ಮಾಹಿತಿ ಲಭಿಸಿದ್ದು, ಅದರ ಆಧಾರದ ಮೇಲೆ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ತನಿಖೆ ವೇಳೆ ಆರೋಪಿ ಧೀರೇಶ್‌ನ ತಂಗಿ ಪತಿ ನೈಜೀರಿಯಾ ಮೂಲದವನಾಗಿದ್ದು, ಆತನ ಮೂಲಕ ಎಂಡಿಎಂಎ ಅಸ್ಸಾಂಗೆ ರವಾನೆಯಾಗುತ್ತಿತ್ತು. ಅಸ್ಸಾಂನಲ್ಲಿರುವ ತಂಗಿಯ ಮೂಲಕ ಕೇರಳ ಹಾಗೂ ಕರ್ನಾಟಕಕ್ಕೆ ಸಾಗಣೆ ಜಾಲ ರೂಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಇದುವರೆಗೆ ಒಟ್ಟು 9 ಮಂದಿಯನ್ನು ಬಂಧಿಸಲಾಗಿದ್ದು, ಸುಮಾರು 3 ಕೆಜಿ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಅಂತರರಾಜ್ಯ ಡ್ರಗ್ ಜಾಲದ ಸಂಪರ್ಕಗಳ ಬಗ್ಗೆ ಮುಂದಿನ ತನಿಖೆ ಮುಂದುವರಿದಿದೆ.