ಡೈಲಿ ವಾರ್ತೆ: 26/ಏಪ್ರಿಲ್/2025

ಪಹಲ್ಗಾಮ್‌ನಲ್ಲೊಬ್ಬ ಸೂಪರ್‌ ಹಿರೋ.. ಬಿಜೆಪಿ ಕುಟುಂಬ ಕಾಪಾಡಿದ ಕಾಶ್ಮೀರಿ ಮುಸ್ಲಿಂ!

ಪ್ರವಾಸಿಗರ ಸ್ವರ್ಗ.. ಪ್ರೇಮ ಕಾಶ್ಮೀರವಾಗಿದ್ದ ಪಹಲ್ಗಾಮ್‌ನಲ್ಲಿ ನೆತ್ತರು ಹರಿದಿದೆ. ಪ್ರವಾಸಿಗರ ಮೇಲೆ ನಡೆದ ಪೈಶಾಚಿಕ ಕೃತ್ಯ ಇಡೀ ದೇಶದ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಲಿದೆ.. ಒಂದು ಕಡೆ ದಾಳಿ ನಡೀತಿದ್ರೆ, ಮತ್ತೊಂದು ಕಡೆ ಆತಿಥ್ಯ ವಹಿಸಿದ್ದ ಕೆಲ ಕಾಶ್ಮೀರಿ ಮುಸ್ಲಿಮರು ಪ್ರವಾಸಿಗರ ರಕ್ಷಣೆಗೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸುವ ಕೆಲಸ ಮಾಡಿದ್ದಾರೆ.
ಅದರಲ್ಲೂ ಉಗ್ರನ ಗನ್ ಕಿತ್ತುಕೊಳ್ಳಲು ಹೋಗಿ ಕುದುರೆ ಸವಾರಿ ಮಾಡಿಸುತ್ತಿದ್ದ ಸ್ಥಳೀಯ ಅಲ್ಲೇ ಜೀವ ಬಿಟ್ಟಿದ್ದಾನೆ.

ಮತ್ತೋರ್ವ ಕಾಶ್ಮೀರಿ ಮುಸ್ಲಿಂ ಯುವಕ ತಾನು ಕರೆತಂದಿದ್ದ 24ಕ್ಕೂ ಹೆಚ್ಚು ಪ್ರವಾಸಿಗರನ್ನ ರಕ್ಷಣೆ ಮಾಡಿದ್ದಾನೆ ಅನ್ನೋ ಸುದ್ದಿ ಬಹಿರಂಗಗೊಂಡಿದೆ..

ಮಿನಿ ಸ್ವಿಡ್ಜರ್‌ಲ್ಯಾಂಡ್ ಎಂದೇ ಹೆಸರಾಗಿರುವ ಪ್ರೇಮ ಕಾಶ್ಮೀರದ ಬೈಸರನ್ ಕಣಿವೆ ಕಡೆ 24 ಜನರ ಜವಾಬ್ದಾರಿ ತೆಗೆದುಕೊಂಡಿದ್ದ ನಜಕತ್ ಅಹ್ಮದ್ ಶಾ ಎಂಬ ಸ್ಥಳೀಯ ಮಾರ್ಗದರ್ಶಿ ಎಲ್ಲರನ್ನೂ ಕರೆದೊಯ್ಯುತ್ತಿದ್ದ. ಮಕ್ಕಳೊಂದಿಗೆ ಛತ್ತಿಸ್‌ಗಢದಿಂದ ಆಗಮಿಸಿದ್ದ ಕುಟುಂಬ ಮಿನಿ ಸ್ವಿಡ್ಜರ್‌ಲ್ಯಾಂಡ್ ನೋಡಲು ಉತ್ಸುಕತೆಯಿಂದ ತೆರಳುತ್ತಿತ್ತು. ಈ ವೇಳೆ ಕೇವಲ ಕಿಲೋಮೀಟರ್ ದೂರದಲ್ಲಿ ಗುಂಡೇಟಿನ ಸದ್ದು ಕೇಳಲಾರಂಭಿಸಿತು. 30 ವರ್ಷ ಮಾರ್ಗದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದ ನಜಕತ್, ಹಿಂದೆ ಮುಂದೆ ಯೋಚಿಸದೇ ಎಲ್ಲರನ್ನೂ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.

ತನ್ನ ಸ್ವಂತ ಸುರಕ್ಷತೆಯನ್ನ ಪಣಕ್ಕಿಟ್ಟು ತಾನು ಆತಿಥ್ಯ ವಹಿಸುತ್ತಿದ್ದ ಜನರನ್ನ ರಕ್ಷಿಸಲು ಓಡುತ್ತಿದ್ದ ನಜಕತ್, ನಿಜಕ್ಕೂ ಹೀರೋ ಆಗಿ ಹೊರಹೊಮ್ಮಿದ್ದಾರೆ ಎಂದು ಖುದ್ದು ಛತ್ತಿಸ್‌ಗಢ ಬಿಜೆಪಿ ಯುವ ಘಟಕದ ಕಾರ್ಯಕರ್ತ ಅರವಿಂದ್ ಅಗರ್ವಾಲ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.. ಅನೇಕರು ಸ್ಥಳೀಯ ಕಾಶ್ಮೀರಿಯನ್ನು ನಿಜವಾದ ಹೀರೋ ಎಂದು ಕರೆದಿದ್ದಾರೆ.

ಗುಂಡಿನ ದಾಳಿಯ ಶಬ್ದ ಕೇಳುತ್ತಿದ್ದಂತೆ, ಮಕ್ಕಳು ತಬ್ಬಿಕೊಂಡರು… ಆಗ ಮೊದಲು ನಾನು ನನ್ನ ಸುತ್ತಲಿನ ಎಲ್ಲರನ್ನೂ ನೆಲದ ಮೇಲೆ ಮಲಗಲು ಹೇಳಿದೆ. ನಂತರ ನಾನು ಬೇಲಿಯಲ್ಲಿ ಒಂದು ಅಂತರವನ್ನು ಗುರುತಿಸಿ ಮಕ್ಕಳನ್ನು ಅದರ ಕಡೆಗೆ ಕರೆದೊಯ್ಯುತ್ತಿದ್ದೆ. ಭಯೋತ್ಪಾದಕರು ನಮ್ಮ ಬಳಿಗೆ ಬರುವ ಮೊದಲು ನಾವು ಸ್ಥಳದಿಂದ ತಪ್ಪಿಸಿಕೊಂಡೆವು. ಪಹಲ್ಗಾಮ್‌ಗೆ ಸ್ವಲ್ಪ ದೂರದಲ್ಲೇ ನನ್ನ ಗ್ರಾಮವಿದೆ. ನನ್ನ ಅತಿಥಿಗಳಿಗೆ ನಾನು ನನ್ನ ಮನೆಯಲ್ಲೇ ಆತಿಥ್ಯ ನೀಡಲು ಬಯಸಿದ್ದೆ. ಪ್ರವಾಸೋದ್ಯಮವಿಲ್ಲದೇ ನಾವು ನಿರುದ್ಯೋಗಿಗಳು. ನಮ್ಮ ಮಕ್ಕಳ ಶಿಕ್ಷಣವು ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ. ಭಯೋತ್ಪಾದಕ ದಾಳಿ ನಮ್ಮ ಮೇಲಿನ ದಾಳಿಯಂತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಗರ್ವಾಲ್‌ರಂತೆ, ಮತ್ತೊಂದು ಕುಟುಂಬ ಕೂಡ ನಜರತ್ ಅವರನ್ನು ಸಹೋದರ ಎಂದು ಸಂಭೋದಿಸಿ, ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ಹೇಳಿದ್ದಾರೆ. ನನ್ನ ಸಹೋದರ, ಅಲ್ಲಿಂದ ನೀವು ನಮ್ಮನ್ನು ರಕ್ಷಿಸಿದ ಉತ್ಸಾಹ ಮತ್ತು ಧೈರ್ಯ ಇನ್ನೂ ನನ್ನ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿದೆ. ಸುತ್ತಲೂ ಅವ್ಯವಸ್ಥೆ, ಗುಂಡೇಟುಗಳು, ಕಿರುಚಾಟಗಳು ಮತ್ತು ಸಾವಿನ ನೆರಳು ಇತ್ತು. ಯಾವುದೇ ಸಾಮಾನ್ಯ ವ್ಯಕ್ತಿ ಅದನ್ನು ಮಾಡಲು ಸಾಧ್ಯವಿಲ್ಲ. ನಜಕತ್ ತನ್ನ ಮಗುವನ್ನು ಎತ್ತಿಕೊಂಡು, ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟಗಳ ಮೇಲೆ 14 ಕಿ.ಮೀ ಓಡಿದ್ದನ್ನು ವಿವರಿಸಿದ್ದಾರೆ. ನೀವು ಆ ದಿನ ನನ್ನ ಜೀವವನ್ನು ಉಳಿಸಿದ್ದಲ್ಲದೆ, ಮಾನವೀಯತೆಯನ್ನ ಜೀವಂತವಾಗಿಟ್ಟಿದ್ದೀರಿ. ನನ್ನ ಜೀವನದುದ್ದಕ್ಕೂ ನಾನು ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.