

ಡೈಲಿವಾರ್ತೆ:12/ಮಾರ್ಚ್/2026


ಇಸ್ರೇಲ್-ಇರಾನ್ ಸಂಘರ್ಷ ತೀವ್ರ: ಅಮೆರಿಕಕ್ಕೆ ಮೂರು ಕಠಿಣ ಷರತ್ತು ವಿಧಿಸಿದ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್

ಟೆಹ್ರಾನ್/ಜೆರುಸಲೇಂ: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಸಂಘರ್ಷ 13ನೇ ದಿನಕ್ಕೆ ಕಾಲಿಟ್ಟಿದ್ದು, ಯುದ್ಧ ಸ್ಥಗಿತಗೊಳಿಸಲು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅಮೆರಿಕದ ಮುಂದೆ ಮೂರು ಪ್ರಮುಖ ಷರತ್ತುಗಳನ್ನು ಮುಂದಿಟ್ಟಿದ್ದಾರೆ.
ಈ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಅಮೆರಿಕ ಹಾಗೂ ಇಸ್ರೇಲ್ ಮೇಲೆ ಒತ್ತಡವನ್ನು ಹೆಚ್ಚಿಸಿದೆ.
ಇರಾನ್ ವಿಧಿಸಿರುವ ಪ್ರಮುಖ ಷರತ್ತುಗಳು:
ಇತ್ತೀಚೆಗೆ ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಮಸೌದ್ ಪೆಜೆಶ್ಕಿಯಾನ್ ಈ ನಿರ್ಧಾರಕ್ಕೆ ಬಂದಿದ್ದಾರೆ.
ಅವರ ಷರತ್ತುಗಳು ಈ ಕೆಳಗಿನಂತಿವೆ
ಅಂತರಾಷ್ಟ್ರೀಯ ಮಾನ್ಯತೆ: ಅಮೆರಿಕವು ಅಂತರಾಷ್ಟ್ರೀಯ ಮಟ್ಟದಲ್ಲಿ ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಅಧಿಕೃತವಾಗಿ ಗುರುತಿಸಬೇಕು.
ನಷ್ಟ ಪರಿಹಾರ: ಇತ್ತೀಚಿನ ಸಂಘರ್ಷದಲ್ಲಿ ಇರಾನ್‌ಗೆ ಉಂಟಾದ ಆರ್ಥಿಕ ಹಾಗೂ ಮೂಲಸೌಕರ್ಯ ಹಾನಿಗಳಿಗೆ ಅಮೆರಿಕ ಸೂಕ್ತ ಪರಿಹಾರ ನೀಡಬೇಕು.
ಸುರಕ್ಷತೆಯ ಭರವಸೆ: ಭವಿಷ್ಯದಲ್ಲಿ ಇರಾನ್ ಮೇಲೆ ಯಾವುದೇ ರೀತಿಯ ದಾಳಿಗಳು ನಡೆಯುವುದಿಲ್ಲ ಎಂಬ ಬಗ್ಗೆ ಅಂತರಾಷ್ಟ್ರೀಯ ಮಟ್ಟದ ಸ್ಪಷ್ಟ ಭರವಸೆಯನ್ನು ಅಮೆರಿಕ ನೀಡಬೇಕು.
ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ತಮ್ಮ ದೇಶ ಬದ್ಧವಾಗಿದೆ ಎಂದು ತಿಳಿಸಿರುವ ಅಧ್ಯಕ್ಷರು, ಈ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಸಂಘರ್ಷಕ್ಕೆ ಅಂತ್ಯ ಹಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಇಸ್ರೇಲ್ ತೀಕ್ಷ್ಣ ಪ್ರತಿಕ್ರಿಯೆ ಮತ್ತು ಸಮರ ತೀವ್ರತೆ
ಇರಾನ್ ವಿಧಿಸಿರುವ ಷರತ್ತುಗಳನ್ನು ನೇರವಾಗಿ ತಿರಸ್ಕರಿಸಿರುವ ಇಸ್ರೇಲ್, ಯುದ್ಧ ಮುಂದುವರಿಸುವ ಸೂಚನೆ ನೀಡಿದೆ. “ಅಗತ್ಯವಿದ್ದಲ್ಲಿ ಇರಾನ್ ವಿರುದ್ಧ ದೀರ್ಘಕಾಲದ ಹೋರಾಟಕ್ಕೆ ನಾವು ಸಿದ್ಧ” ಎಂದು ಇಸ್ರೇಲ್ ಸೇನಾ ವಕ್ತಾರರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚಿನ ಪ್ರಮುಖ ದಾಳಿಗಳು:
ಸಮುದ್ರ ಮಾರ್ಗದಲ್ಲಿ ಬಾಂಬ್ ಅಳವಡಿಸುತ್ತಿದ್ದ ಇರಾನ್‌ನ 16 ಹಡಗುಗಳನ್ನು ಇಸ್ರೇಲ್ ಸೇನೆ ಧ್ವಂಸಗೊಳಿಸಿದೆ.
ಇದಕ್ಕೆ ಪ್ರತಿಯಾಗಿ ಇರಾನ್ ಅಮೆರಿಕದ ತೈಲ ಟ್ಯಾಂಕರ್ ಮೇಲೆ ಭೀಕರ ದಾಳಿ ನಡೆಸಿದೆ. ಈ ಘಟನೆಯಲ್ಲಿ ಭಾರತೀಯ ಪ್ರಜೆಯೊಬ್ಬರು ಸಾವಿಗೀಡಾಗಿರುವುದು ವರದಿಯಾಗಿದೆ.
ಈ ದಾಳಿ-ಪ್ರತಿದಾಳಿಗಳಿಂದಾಗಿ ಅರಬ್ ರಾಷ್ಟ್ರಗಳಲ್ಲಿ ಆತಂಕ ಮನೆಮಾಡಿದ್ದು, ಜಾಗತಿಕ ತೈಲ ಮಾರುಕಟ್ಟೆಯ ಮೇಲೆಯೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.