ಡೈಲಿ ವಾರ್ತೆ: 28/ಏಪ್ರಿಲ್/2025

ಬಿ.ಸಿ.ರೋಡ್ ; ಬೆಲೆಯೇರಿಕೆಯ ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ಪ್ರತಿಭಟನೆ

ಬಂಟ್ವಾಳ : ದಿನೇ ದಿನೇ ದುಪ್ಪಟ್ಟಾಗುತ್ತಿರುವ ದಿನ ಬಳಕೆ ಮತ್ತು ಇತರ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ‘ಜನತೆಯ ಹೊರೆ ಇಳಿಸಿರಿ’ ಎಂಬ ಘೋಷ ವಾಕ್ಯದೊಂದಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಭಾನುವಾರ ಬಿ,ಸಿ.ರೋಡ್ ನಲ್ಲಿ ಪ್ರತಿಭಟನೆ ನಡೆಯಿತು.

ಗ್ಯಾಸ್ ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆ ಸ್ಥಳದಲ್ಲಿ ಸೌದೆ ಉರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು

ಪ್ರತಿಭಟನೆಯನ್ನುದ್ದೇಶಿಸಿ ವಿಮ್ ಗ್ರಾಮಾಂತರ ಜಿಲ್ಲಾಧ್ಯಕ್ಷೆ ನೌರೀನ್ ಅಲಂಪಾಡಿ ಮಾತನಾಡಿ ‘ಆರ್ಥಿಕತೆ ಪದೇ ಪದೇ ಕುಸಿಯುತ್ತಿರುವ ಈ ಸಂದಿಗ್ಧತೆಯಲ್ಲಿ ಜನತೆ ಈಗಾಗಲೇ ದೈನಂದಿನ ಜೀವನ ದೂಡಲು ಸಂಕಷ್ಟಗಳನ್ನು ಎದುರಿಸುತ್ತಿರುವಾಗ, ಕೇಂದ್ರ ಬಿಜೆಪಿ ಸರ್ಕಾರ ಅಡುಗೆ ಅನಿಲ ದರವನ್ನು ಹೆಚ್ಚಿಸುವುದರ ಮೂಲಕ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರ ವಿದ್ಯುತ್, ಹಾಲು, ಬಸ್ ದರಗಳನ್ನು ಏರಿಸುವ ಮೂಲಕ ಮತ್ತೆ ಮತ್ತೆ ಬಡತನಕ್ಕೆ ತಳ್ಳುತ್ತಿದೆ’ ಎಂದು ಆರೋಪಿಸಿದರು.

ಬಂಟ್ವಾಳ ಪುರಸಭಾ ಸದಸ್ಯೆ ಝೀನತ್ ಗೂಡಿನಬಳಿ ಮಾತನಾಡಿ ‘ಸರಕಾರಗಳ ಬೆಲೆ ಏರಿಕೆಗಳ ದುಪ್ಪಟ್ಟಿಗೆ ಬಡ ಮಹಿಳೆಯರು ಮತ್ತು ಸಾಮಾನ್ಯ ಜನರು ಹೆಚ್ಚು ಬಾಧಿತರಾಗುತ್ತಿದ್ದಾರೆ. ಸರಕಾರ ಇನ್ನಾದರೂ ಕಣ್ಣು ತೆರೆಯಬೇಕಾಗಿದೆ. ಸರಕಾರಗಳು ಒಡೆದು ಆಳುವ ರಾಜಕೀಯವನ್ನು , ಓಲೈಕೆಯ ರಾಜಕೀಯವನ್ನು ಬದಿಗಿಟ್ಟು ಇಂತಹ ಆರ್ಥಿಕ ಭಾರಗಳನ್ನು, ಹೊರೆಯನ್ನು ಇಳಿಸುವ ಮೂಲಕ, ಜನತೆಯ ಜನಸ್ನೇಹಿಯಾಗಲು ಕಲಿಯಲಿ’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಬಲಿಯಾದವರಿಗೆ ಮೌನ ಪ್ರಾರ್ಥನೆ ನಡೆಸಲಾಯಿತು.

ವಿಮ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯ ಬೆಳ್ಳಾರೆ, ವಿಮ್ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷೆ ಝಹನ ಬಂಟ್ವಾಳ, ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಮೀಮಾ ತುಂಬೆ, ನುಸೈಬ ಕಲ್ಲಡ್ಕ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.