




ಡೈಲಿ ವಾರ್ತೆ: 01/MAY/2025


ಸತತ 7ನೇ ದಿನವೂ ಕದನ ವಿರಾಮ ಉಲ್ಲಂಘಿಸಿದ ಪಾಕ್ ಸೇನೆ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಮೂರು ಗಡಿ ಜಿಲ್ಲೆಗಳಾದ್ಯಂತ ಹಲವೆಡೆ ಪಾಕಿಸ್ತಾನಿ ಪಡೆಗಳು ನಿಯಂತ್ರಣ ರೇಖೆಯಲ್ಲಿ ಸತತ ಏಳನೇ ರಾತ್ರಿಯೂ ಕದನ ವಿರಾಮ ಉಲ್ಲಂಘನೆ ಮುಂದುವರೆಸಿದ್ದು, ಭಾರತೀಯ ಸೇನೆಯೂ ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒಗಳು) ಮಂಗಳವಾರ ಮಾತುಕತೆ ನಡೆಸಿದ್ದರೂ, ಗುಂಡಿನ ಚಕಮಕಿ ಮುಂದುವರೆದಿದೆ.
”ಏಪ್ರಿಲ್ 30-ಮೇ 1, 2025ರ ರಾತ್ರಿ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಕುಪ್ವಾರಾ, ಉರಿ ಮತ್ತು ಅಖ್ನೂರ್ ಎದುರಿನ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನಿ ಸೇನೆಯು ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನೆಯೂ ಕೂಡ ತ್ವರಿತವಾಗಿ ಪ್ರತಿಕ್ರಿಯಿಸಿದೆ” ಎಂದು ಜಮ್ಮುವಿನ ರಕ್ಷಣಾ ವಕ್ತಾರರು ವಿವರಿಸಿದ್ದಾರೆ.
ಆರಂಭದಲ್ಲಿ ಉತ್ತರ ಕಾಶ್ಮೀರದ ಕುಪ್ವಾರಾ ಮತ್ತು ಬಾರಾಮುಲ್ಲಾ ಜಿಲ್ಲೆಗಳ ಎಲ್‌ಒಸಿಯ ಉದ್ದಕ್ಕೂ ಹಲವಾರು ಪೋಸ್ಟ್‌ಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದ ಪಾಕಿಸ್ತಾನ, ಬಳಿಕ ಪೂಂಚ್ ವಲಯ ಹಾಗೂ ನಂತರ ಜಮ್ಮು ಪ್ರದೇಶದ ಅಖ್ನೂರ್ ವಲಯದಲ್ಲೂ ತನ್ನ ಕದನ ವಿರಾಮ ಉಲ್ಲಂಘನಾ ಕೃತ್ಯವನ್ನು ವಿಸ್ತರಿಸಿತ್ತು.
ಮಂಗಳವಾರ ರಾತ್ರಿ ರಾಜೌರಿ ಜಿಲ್ಲೆಯ ಸುಂದರ್‌ಬಾನಿ ಮತ್ತು ನೌಶೇರಾ ವಲಯಗಳಲ್ಲಿನ ಎಲ್‌ಒಸಿಯ ಉದ್ದಕ್ಕೂ ಹಲವಾರು ಪೋಸ್ಟ್‌ಗಳ ಮೇಲೆ ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ದಾಳಿ ನಡೆಸಿತ್ತು. ಬಳಿಕ, ಅದು ಜಮ್ಮು ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಪರ್ಗ್ವಾಲ್ ವಲಯಕ್ಕೆ ತನ್ನ ಗುಂಡಿನ ದಾಳಿಯನ್ನು ವಿಸ್ತರಿಸಿತ್ತು.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಬೆನ್ನಲ್ಲೇ ಭಾರತವು ಸಿಂಧೂ ಜಲ ಒಪ್ಪಂದ ಅಮಾನತುಗೊಳಿಸಿದೆ. ಇದಾದ ಕೆಲ ಗಂಟೆಗಳಲ್ಲೇ, ಏಪ್ರಿಲ್ 24ರ ರಾತ್ರಿಯಿಂದಲೂ ಪಾಕಿಸ್ತಾನಿ ಪಡೆಗಳು ಕಾಶ್ಮೀರ ಕಣಿವೆಯಿಂದ ಪ್ರಾರಂಭಿಸಿ ಜಮ್ಮುಕಾಶ್ಮೀರದ ಎಲ್‌ಒಸಿಯ ಉದ್ದಕ್ಕೂ ವಿವಿಧೆಡೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿವೆ.
ಏಪ್ರಿಲ್ 24ರಂದು, ಪಾಕಿಸ್ತಾನವು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿತ್ತು. ವಾಘಾ ಗಡಿಯನ್ನು ಬಂದ್ ಮಾಡಲಾಗಿದೆ. ಭಾರತದೊಂದಿಗಿನ ಎಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸಿರುವ ಪಾಕ್, ಸಿಂಧೂ ಜಲ ಒಪ್ಪಂದದಡಿ ಪಾಕಿಸ್ತಾನಕ್ಕೆ ನೀಡಬೇಕಾದ ನೀರನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನವು “ಯುದ್ಧದ ಕೃತ್ಯ” ಎಂದು ಹೇಳಿದೆ. ಭಾರತ ಮತ್ತು ಪಾಕಿಸ್ತಾನವು 2021ರ ಫೆಬ್ರವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಗಡಿಗಳಲ್ಲಿ ಹೊಸ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದವು.
ಭಾರತವು ಪಾಕಿಸ್ತಾನದೊಂದಿಗೆ ಒಟ್ಟು 3,323 ಕಿಮೀ ಗಡಿ ಹಂಚಿಕೊಂಡಿದೆ. ಇದನ್ನು ಮೂರು ಭಾಗಗಳಾಗಿ ಅಂದರೆ, ಅಂತಾರಾಷ್ಟ್ರೀಯ ಗಡಿ (ಐಬಿ) – ಗುಜರಾತ್‌ನಿಂದ ಜಮ್ಮುವಿನ ಅಖ್ನೂರ್‌ನಲ್ಲಿರುವ ಚೆನಾಬ್ ನದಿಯ ಉತ್ತರ ದಂಡೆಯವರೆಗೆ ಸುಮಾರು 2,400 ಕಿಮೀ; ಜಮ್ಮುವಿನ ಕೆಲವು ಭಾಗಗಳಿಂದ ಲೇಹ್‌ನ ಕೆಲವು ಭಾಗಗಳವರೆಗೆ 740 ಕಿಮೀ ಉದ್ದದ ನಿಯಂತ್ರಣ ರೇಖೆ (ಎಲ್‌ಒಸಿ); ಹಾಗೂ ಸಿಯಾಚಿನ್ ಪ್ರದೇಶವನ್ನು NJ 9842ರಿಂದ ಉತ್ತರದಲ್ಲಿರುವ ಇಂದಿರಾ ಕೋಲ್ ವರೆಗೆ ವಿಭಜಿಸುವ 110 ಕಿಮೀ ಉದ್ದದ ವಾಸ್ತವಿಕ ನೆಲದ ಸ್ಥಾನ ರೇಖೆ (AGPL) ಎಂದು ಪರಿಗಣಿಸಲಾಗುತ್ತದೆ.