


ಡೈಲಿ ವಾರ್ತೆ: 28/ಜುಲೈ/2025


ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ವೀಡಿಯೋ: ಯೂಟ್ಯೂಬರ್‌ಗಳ ವಿರುದ್ಧ ಪ್ರಕರಣ ದಾಖಲು

ಉಡುಪಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಧರ್ಮಸ್ಥಳ, ಉಡುಪಿ, ಕೊಲ್ಲೂರು ಕ್ಷೇತ್ರಗಳ ಬಗ್ಗೆ ಅವಹೇಳನಕಾರಿ ವೀಡಿಯೋ ಮಾಡಿ ಹರಿಯಬಿಟ್ಟ ಕೇರಳದ ಇಬ್ಬರು ವ್ಯಕ್ತಿಗಳ ಮೇಲೆ ಹಿರಿಯಡ್ಕದ ಬೆಳ್ಳರ್ಪಾಡಿ ನಿವಾಸಿ ಶ್ರೀಕುಮಾರ್ ಅವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಲು ಮಾರ್ಟ್ ಟ್ರಾವೆಲರ್ ಮತ್ತು ಮಾನಫ್ ಎಂಬ ವ್ಯಕ್ತಿಗಳು ಫೇಸ್‌ಬುಕ್ ಹಾಗೂ ಯೂಟ್ಯೂಬ್‌ಗಳಲ್ಲಿ ಈ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆಗಳನ್ನು ನೀಡಿ ವೀಡಿಯೋ ಅಪ್‌ಲೋಡ್ ಮಾಡಿದ್ದರು. ಕುಟುಂಬ ಸಹಿತರಾಗಿ ಕರಾವಳಿಯ ಧಾರ್ಮಿಕ ಕ್ಷೇತ್ರಗಳಿಗೆ ಹೆಣ್ಣು ಮಕ್ಕಳೊಂದಿಗೆ ಹೋಗಬೇಡಿ, ಹೆಣ್ಣು ಮಕ್ಕಳು ಸುರಕ್ಷಿತವಲ್ಲ, ಕೊಡಚಾದ್ರಿ ಸಹಿತ ಎಲ್ಲ ಕ್ಷೇತ್ರಗಳಲ್ಲಿಯೂ ಇಂತಹ ಪ್ರಕರಣಗಳು ನಡೆದಿರಬಹುದು ಎಂಬ ಹೇಳಿಕೆ ನೀಡಿದ್ದು, ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳಾಗಿದ್ದು, ಈ ಬಗ್ಗೆ ಪೊಲೀಸರು ತತ್‌ಕ್ಷಣ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.