



ಡೈಲಿ ವಾರ್ತೆ: 02/NOV/2025

ಕಲ್ಯಾಣಪುರ ಮಿಲಾಗ್ರಿಸ್ ಹೈಸ್ಕೂಲಿನಲ್ಲಿ ರಂಗಶಿಕ್ಷಣ ಉದ್ಘಾಟನೆ: ರಂಗಶಿಕ್ಷಣ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ವೇದಿಕೆ – ಡಾ.ತಲ್ಲೂರು

ಉಡುಪಿ : ರಂಗ ಶಿಕ್ಷಣದಿಂದ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ವ್ಯಕ್ತಿಯೊಳಗೆ ಅಡಿಗಿರುವ ಪ್ರತಿಭೆಯನ್ನು ಈ ರಂಗ ಶಿಕ್ಷಣದ ಮೂಲಕ ಹೊರ ಬರಲು ಸಧ್ಯವಿದೆ. ನಾಟಕ ಕೇವಲ ಮನೋರಜನೆ ಮಾತ್ರವಲ್ಲ ಅದು ವ್ಯಕ್ತಿತ್ವವನ್ನು ರೂಪಿಸುವ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಈ ರಂಗ ಶಿಕ್ಷಣದ ಪ್ರಯೋಜನ ಪಡೆಯಲು ಮುಂದಾಗಬೇಕು ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಕಲ್ಯಾಣಪುರ ಮಿಲಾಗ್ರಿಸ್ ಹೈಸ್ಕೂಲಿನಲ್ಲಿ ರಾಜ್ಯದ ಪ್ರತಿಷ್ಠಿತ ರಂಗಸoಸ್ಥೆ ರಂಗಭೂಮಿ ಉಡುಪಿ ವತಿಯಿದ ಮಕ್ಕಳಿಗೆ ನಾಟಕ, ರಂಗ ತರಬೇತಿಯನ್ನು ಉಚಿತವಾಗಿ ನೀಡುವ ‘ರಂಗ ಶಿಕ್ಷಣ’ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಜಿಲ್ಲೆಯ 90ಕ್ಕೂ ಅಧಿಕ ಶಾಲೆಗಳಲ್ಲಿ ನಡೆಯುತ್ತಿರುವ ಯಕ್ಷಗಾನ ತರಬೇತಿ ಯಕ್ಷಶಿಕ್ಷಣವನ್ನು 3,000ಕ್ಕೂ ಅಧಿಕ ಮಕ್ಕಳು ಪಡೆಯುತ್ತಿದ್ದಾರೆ. ಯಕ್ಷಗಾನ ಕಲಿಕೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲದೆ ಅವರ ವ್ಯಕ್ತಿತ್ವ ವಿಕಸನಕ್ಕೂ ಕಾರಣವಾಗಿರುವುದನ್ನು ಮನಗಂಡಿದ್ದೇವೆ. ಅಲ್ಲದೆ ಭವಿಷ್ಯದಲ್ಲಿ ಯಕ್ಷ ಶಿಕ್ಷಣ ಪಡೆದ ಮಕ್ಕಳು ಉತ್ತಮ ಕಲಾವಿದರಾಗಿ ಮೂಡಿ ಬರಬಹುದು ಅಥವಾ ಒಬ್ಬ ಉತ್ತಮ ಪ್ರೇಕ್ಷಕರಾಗ ಬಲ್ಲರು. ಇದರಿಂದ ಯಕ್ಷಗಾನಕ್ಕೆ ಭವಿಷ್ಯದಲ್ಲಿ ಉತ್ತಮ ಕಲಾವಿದರು, ಪ್ರೇಕ್ಷಕರು ಇಲ್ಲ ಎಂಬ ಕೊರಗು ನಿವಾರಣೆಯಾಗಬಹುದು. ಈ ದೃಷ್ಟಿಯಿಂದಲೇ ಮಕ್ಕಳಿಗೆ ರಂಗ ಶಿಕ್ಷಣವನ್ನು ನೀಡಿ ಅವರನ್ನು ಪ್ರಬುದ್ಧ ರಂಗಕರ್ಮಿಗಳನ್ನಾಡಿ ಮಾಡಿ ಅವರ ವ್ಯಕ್ತಿತ್ವ ವಿಕಸನದ ಜೊತೆಗೆ ಭವಿಷ್ಯದ ಕಲಾವಿದರನ್ನಾಗಿ ಮಾಡುವ ಮೂಲಕ ರಂಗಭೂಮಿಯನ್ನು ಇನ್ನಷ್ಟು ಶ್ರೀಮಂತಗೊಳಿಸುವ ಸಂಕಲ್ಪ ತೊಟ್ಟಿದ್ದೇವೆ.
ಆರಂಭದಲ್ಲಿ 12 ಶಿಕ್ಷಣ ಸಂಸ್ಥೆಗಳನ್ನು ಆರಿಸಿಕೊಂಡಿದ್ದು, ಈ ವರ್ಷ 25 ಶಿಕ್ಷಣ ಸಂಸ್ಥೆಗಳಲ್ಲಿ ರಂಗಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ರಂಗ ಶಿಕ್ಷಣದಿಂದ ಮಕ್ಕಳಲ್ಲಿ ಸಭಾ ಕಂಪನ, ಮಾತುಗಾರಿಕೆ, ಅಭಿನಯ, ವಾಕ್ಚಾತುರ್ಯ ಸೇರಿದಂತೆ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಎಲ್ಲಾ ಶಿಕ್ಷಣವೂ ಇಲ್ಲಿ ದೊರೆಯುತ್ತದೆ.
ಶಿಕ್ಷಣದೊಂದಿಗೆ ಇಂತಹ ಶಿಕ್ಷಣೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಹೆತ್ತವರು, ಶಿಕ್ಷಕರು ಪ್ರೋತಾಹಿಸಬೇಕು. ಈ ಬಾರಿ ಸುಮಾರು 3,000 ಮಕ್ಕಳಿಗೆ ರಂಗ ಶಿಕ್ಷಣ ಕೊಡುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಪ್ರಬುದ್ಧ ರಂಗಕಲಾವಿದರನ್ನು ರಂಗಶಿಕ್ಷಣ ನೀಡಲು ಗುರುಗಳಾಗಿ ಆಯ್ಕೆ ಮಾಡಲಾಗಿದೆ. ಇವೆಲ್ಲಾ ವೆಚ್ಚವನ್ನು ರಂಗಭೂಮಿ ಉಡುಪಿ ಭರಿಸಲಿದೆ. ಈ ಮೂಲಕ ಉತ್ತಮ ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ರಂಗಶಿಕ್ಷಣದ ಮೂಲಕ ಬುನಾದಿ ಹಾಕುವತ್ತ ರಂಗಭೂಮಿ ಹೆಜ್ಜೆ ಇಟ್ಟಿದೆ ಎಂದು ಅವರು ಹೇಳಿದರು.
ರಂಗಭೂಮಿ ಉಡುಪಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, 60 ಸಂವತ್ಸರಗಳನ್ನು ದಾಟಿರುವ ನಾಡಿನ ಪ್ರಬುದ್ಧ ರಂಗಸಂಸ್ಥೆಯಾಗಿರುವ ರಂಗಭೂಮಿ ಉಡುಪಿ ಈ ರಂಗ ಶಿಕ್ಷಣದ ಮೂಲಕ ಮಕ್ಕಳಲ್ಲಿ ಏಕತೆಯ ಭಾವವನ್ನು ಇನ್ನಷ್ಟು ಗಟ್ಟಗೊಳಿಸಲು ಈ ರಂಗಶಿಕ್ಷಣ ನೆರವಾಗುತ್ತದೆ. ಜನಪ್ರಿಯ ಸೆಲೆಬ್ರೆಟಿಗಳನ್ನು ಕಂಡಾಗ ನಮಗೂ ಅವರಂತೆ ಆಗಬೇಕು ಎಂಬ ಮನಸ್ಸಾಗುತ್ತದೆ, ಈ ಕನಸುಗನ್ನು ನನಸಾಗಿಸಲು ರಂಗ ಶಿಕ್ಷಣ ಸಹಾಯ ಮಾಡುತ್ತದೆ. ಹೆತ್ತವರು ಕೂಡಾ ತಮ್ಮ ಮಕ್ಕಳು, ಮೊಮ್ಮಕ್ಕಳು ಭವಿಷ್ಯದಲ್ಲಿ ಸಾಧಕರಾಗಬೇಕು ಎನ್ನುವ ತುಡಿತ ಹೊಂದಿದ್ದರೆ ಮಕ್ಕಳಿಗೆ ರಂಗಶಿಕ್ಷಣ ಪಡೆಯಲು ಪ್ರೋತ್ಸಾಹಿಸಬೇಕು. ಯಾವ ಟೀಚರ್‌ಗಳು, ಪಠ್ಯಪುಸ್ತಕಗಳು ಕಲಿಸದ ಶಿಕ್ಷಣವನ್ನು ಇಲ್ಲಿ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಅನಿತಾ ಡಿಸೋಜಾ, ಹಿರಿಯ ರಂಗಕರ್ಮಿ ಹಾಗೂ ನಾಟಕ ನಿರ್ದೇಶಕ ಬಾಸುಮ ಕೊಡಗು, ರಂಗಭೂಮಿ ಉಡುಪಿ ಸಂಸ್ಥೆಯ ಉಪಾಧ್ಯಕ್ಷ ರಾಜಗೋಪಾಲ ಬಲ್ಲಾಳ್, ರಂಗಶಿಕ್ಷಣ ಸಹಸಂಚಾಲಕರಾದ ರವಿರಾಜ್ ನಾಯಕ್ ಮತ್ತು ಅಮಿತಾಂಜಲಿ ಕಿರಣ್, ಸಂಯೋಜಕ ಸೂರ್ಯಪ್ರಕಾಶ್, ಕಾರ್ಯಕಾರಿ ಸಮಿತಿ ಸದಸ್ಯ ಸುಬ್ರಹ್ಮಣ್ಯ ಶೇರಿಗಾರ್, ಸದಸ್ಯರಾದ ಮಲ್ಲಿಕಾ ಭಟ್, ಪಲ್ಲವಿ ಕೊಡಗು, ಯೋಗೀಶ್, ಅಭಿಷೇಕ್, ವೀಣಾ ಮೊದಲಾದವರು ಉಪಸ್ಥಿತರಿದ್ದರು.
ರಂಗಶಿಕ್ಷಣದ ಸಹ ಸಂಚಾಲಕ ರವಿರಾಜ್ ನಾಯಕ್ ಸ್ವಾಗತಿಸಿದರು. ಶಿಕ್ಷಕಿ ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.