

ಡೈಲಿವಾರ್ತೆ:17/ಮಾರ್ಚ್/2026


ಕಾಬೂಲ್ ಆಸ್ಪತ್ರೆ ಮೇಲೆ ಪಾಕ್ ಭೀಕರ ವೈಮಾನಿಕ ದಾಳಿ: 400 ಮಂದಿ ಸಾವು

ಕಾಬೂಲ್/ಇಸ್ಲಾಮಾಬಾದ್: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಈಗ ಪೂರ್ಣ ಪ್ರಮಾಣದ ಯುದ್ಧವಾಗಿ ಮಾರ್ಪಟ್ಟಿದೆ.
ಕಾಬೂಲ್‌ನಲ್ಲಿರುವ 2,000 ಹಾಸಿಗೆಗಳ ಬೃಹತ್ ಆಸ್ಪತ್ರೆಯ ಮೇಲೆ ಪಾಕಿಸ್ತಾನ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಕನಿಷ್ಠ 400 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದು ಅಫ್ಘಾನ್ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯ ಎಂದು ಬಣ್ಣಿಸಲಾಗಿದೆ.
ಪರಸ್ಪರ ಆರೋಪ-ಪ್ರತ್ಯಾರೋಪ:
ಅಫ್ಘಾನ್ ಸರ್ಕಾರದ ಉಪ ವಕ್ತಾರ ಹಮ್ದುಲ್ಲಾ ಫಿತ್ರಾತ್ ಅವರು ಈ ದಾಳಿಯನ್ನು ದೃಢಪಡಿಸಿದ್ದು, ನಾಗರಿಕರು ಮತ್ತು ರೋಗಿಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಅಮಾನವೀಯ ಕೃತ್ಯ ಎಸಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. “ಪಾಕಿಸ್ತಾನವು ಆಸ್ಪತ್ರೆಗಳು ಮತ್ತು ನಿರಾಶ್ರಿತರ ಕೇಂದ್ರಗಳನ್ನು ಗುರಿಯಾಗಿಸಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸುತ್ತಿದೆ,” ಎಂದು ವಕ್ತಾರ ಜಬಿಹುಲ್ಲಾ ಮುಜಾಹಿದ್ ಖಂಡಿಸಿದ್ದಾರೆ.
ಆದರೆ, ಈ ಆರೋಪಗಳನ್ನು ಪಾಕಿಸ್ತಾನ ಸಾರಾಸಗಟಾಗಿ ತಿರಸ್ಕರಿಸಿದೆ. ಆಸ್ಪತ್ರೆಯ ಮೇಲೆ ದಾಳಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿರುವ ಪಾಕ್ ಮಾಹಿತಿ ಸಚಿವ ಅತ್ತೌಲ್ಲಾ ತರಾರ್, “ನಾವು ಕೇವಲ ಮಿಲಿಟರಿ ನೆಲೆಗಳು ಮತ್ತು ಮದ್ದುಗುಂಡು ಸಂಗ್ರಹಣಾ ಕೇಂದ್ರಗಳ ಮೇಲೆ ಮಾತ್ರ ನಿಖರ ದಾಳಿ ನಡೆಸಿದ್ದೇವೆ,” ಎಂದು ಸಮರ್ಥಿಸಿಕೊಂಡಿದ್ದಾರೆ.
’ಮುಕ್ತ ಯುದ್ಧ’ ಘೋಷಣೆ:
ಈ ಬೆಳವಣಿಗೆಗಳ ಬೆನ್ನಲ್ಲೇ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಅಫ್ಘಾನಿಸ್ತಾನದ ವಿರುದ್ಧ ‘ಮುಕ್ತ ಯುದ್ಧ’ ಘೋಷಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸ್ಫೋಟಕಗೊಳಿಸಿದೆ. ಕಳೆದ ಮೂರು ವಾರಗಳಿಂದ ನಡೆಯುತ್ತಿರುವ ಈ ಸಂಘರ್ಷ ಈಗ ನೆರೆಯ ರಾಷ್ಟ್ರಗಳ ನಡುವೆ ದೊಡ್ಡ ಮಟ್ಟದ ಯುದ್ಧಕ್ಕೆ ನಾಂದಿ ಹಾಡಿದಂತಿದೆ.