ಡೈಲಿವಾರ್ತೆ:17/ಮಾರ್ಚ್/2026

ಫರಂಗಿಪೇಟೆ ನೇತ್ರಾವತಿ ನದಿ ದಡದಲ್ಲಿ ಗಾಂಜಾ ಸೇವನೆ: ಯುವಕನ ಬಂಧನ

ಬಂಟ್ವಾಳ: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿ ಅಶಾಂತ ರೀತಿಯಲ್ಲಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ ಘಟನೆ ಪುದು ಗ್ರಾಮದ ಫರಂಗಿಪೇಟೆ ನೇತ್ರಾವತಿ ನದಿ ದಡದಲ್ಲಿ ಮಾ.16ರಂದು ಸಂಜೆ ನಡೆದಿದೆ.

ಬಂಧಿತನನ್ನು ಪುದು ಗ್ರಾಮದ ನಿವಾಸಿ ನೌಫಲ್ (27) ಎಂದು ಗುರುತಿಸಲಾಗಿದೆ.

ಖಚಿತ ಮಾಹಿತಿ ಆಧರಿಸಿ ಬಂಟ್ವಾಳ ಗ್ರಾಮಾಂತರ ಠಾಣೆಯ ಪಿಎಸ್ಸೈ ಮಂಜುನಾಥ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ.
ಮಾ.16ರಂದು ಸಂಜೆ ಸುಮಾರು 5.30ರ ವೇಳೆಗೆ ಫರಂಗಿಪೇಟೆ ನೇತ್ರಾವತಿ ನದಿ ದಡದಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿ ನಶೆಯಲ್ಲಿರುವ ರೀತಿಯಲ್ಲಿ ವರ್ತಿಸುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತು. ತಕ್ಷಣ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು, ನಶೆಯಲ್ಲಿ ಇದ್ದ ಆರೋಪಿಯನ್ನು ಕಂಡಾಗ ಆತ ಓಡಿ ಹೋಗಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಆತನನ್ನು ಸುತ್ತುವರಿದು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ನಂತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆರೋಪಿ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ಆರೋಪಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.