

ಡೈಲಿವಾರ್ತೆ:17/ಮಾರ್ಚ್/2026


ಬಂಟ್ವಾಳ| ರಸ್ತೆ ವಿವಾದ: ಕುಟುಂಬ – ಚರ್ಚ್ ಸಂಘರ್ಷ ಹಲ್ಲೆಗೇ ತಲುಪಿದ್ದು, ದೂರು-ಪ್ರತಿದೂರು ದಾಖಲು

ಬಂಟ್ವಾಳ: ರಸ್ತೆ ವಿಚಾರವಾಗಿ ಕುಟುಂಬ ಮತ್ತು ಸ್ಥಳೀಯ ಚರ್ಚ್ ನಡುವೆ ಉದ್ಭವಿಸಿದ್ದ ತಕರಾರು ತೀವ್ರಗೊಂಡು ಪರಸ್ಪರ ಹಲ್ಲೆಗೆ ತಲುಪಿದ ಘಟನೆ ತಾಲೂಕಿನ ಚೇಳೂರಿನಲ್ಲಿ ಮಾರ್ಚ್ 14ರಂದು ನಡೆದಿದೆ. ಘಟನೆಗೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಉಳ್ಳಾಲ ತಾಲೂಕಿನ ಚೇಳೂರು ನಿವಾಸಿ ಡಯಾನಾ ಜೆಸ್ಟಿನ್ ಡಿಸೋಜಾ (51) ಅವರು ನೀಡಿದ ದೂರಿನ ಪ್ರಕಾರ, ತಮ್ಮ ಮನೆಗೆ ಹೋಗುವ ರಸ್ತೆಯ ವಿಚಾರವಾಗಿ ತಮ್ಮ ಕುಟುಂಬ ಹಾಗೂ ಸ್ಥಳೀಯ ಚರ್ಚ್ ನಡುವೆ ಹಲವು ದಿನಗಳಿಂದ ವಿವಾದ ನಡೆಯುತ್ತಿತ್ತು. ಮಾರ್ಚ್ 14ರಂದು ಚರ್ಚ್‌ಗೆ ಸಂಬಂಧಿಸಿದ ಕೆಲವರು ಜೆಸಿಬಿ ಯಂತ್ರದ ಮೂಲಕ ರಸ್ತೆ ಕಾಮಗಾರಿ ನಡೆಸಿ, ತಮ್ಮ ಮನೆಗೆ ಹೋಗುವ ದಾರಿಯನ್ನು ಬಂದ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಡಯಾನಾ ಹಾಗೂ ಅವರ ಮಕ್ಕಳು ದಾರಿ ಬಿಡುವಂತೆ ಕೇಳಿಕೊಂಡಾಗ, ಆರೋಪಿಗಳಾದ ಜೆಸಿಂತಾ ಡಿಸೋಜಾ, ಜೆಸಿಂತಾ ಕ್ರಾಸ್ತಾ, ಅನಿಷಾ ಡಿಸೋಜಾ, ಹಿಲ್ಡಾ ಮೊಂತೇರೊ, ದೊರಾ ರೊಡ್ರಿಗಸ್, ಅಲೆನ್ ರೋಸ್ ಹಾಗೂ ಇತರರು ಸೇರಿ ಹಲ್ಲೆ ನಡೆಸಿ, ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡ ಡಯಾನಾ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಅಪರಾಧ ಕ್ರಮಾಂಕ 37/2026ರಡಿ ವಿವಿಧ ಕಲಂಗಳ ಪ್ರಕಾರ ಪ್ರಕರಣ ದಾಖಲಾಗಿದೆ.
ಇದಕ್ಕೆ ಪ್ರತಿಯಾಗಿ ಜೆಸಿಂತಾ ಡಿಸೋಜಾ ಅವರು ಕೂಡಾ ಪ್ರತಿದೂರು ನೀಡಿದ್ದು, ರಸ್ತೆ ಕಾಮಗಾರಿ ವೇಳೆ ಡಯಾನಾ ಡಿಸೋಜಾ ಅವರು ತಡೆ ಒಡ್ಡಿ ತಮಗೆ ಹಲ್ಲೆ ನಡೆಸಿ ಅವಾಚ್ಯವಾಗಿ ಬೈದಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ವಿನಿಲ್ ಎಂಬಾತ ಜೀವ ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಜೆಸಿಂತಾ ಅವರನ್ನು ಕೂಡಾ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಅಪರಾಧ ಕ್ರಮಾಂಕ 38/2026ರಡಿ ಪ್ರಕರಣ ದಾಖಲಾಗಿದೆ.
ಎರಡೂ ಪಾರ್ಶ್ವಗಳಿಂದ ಬಂದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಘಟನೆಯ ಕುರಿತು ಮುಂದಿನ ತನಿಖೆ ಮುಂದುವರಿಸಿದ್ದಾರೆ.