ಡೈಲಿ ವಾರ್ತೆ: 02/NOV/2025

ಬೆಳಗಾವಿಯಲ್ಲಿ ರಾಜ್ಯೋತ್ಸವ ಮೆರವಣಿಗೆ ವೇಳೆ ಚಾಕು ಇರಿತ: ಐವರಿಗೆ ಗಾಯ

ಬೆಳಗಾವಿ: ರಾಜ್ಯೋತ್ಸವ ಮೆರವಣಿಗೆ ವೇಳೆ ಘರ್ಷಣೆ ಉಂಟಾಗಿ ಐವರಿಗೆ ಚಾಕು ಇರಿತವಾಗಿರುವ ಘಟನೆ ಇಲ್ಲಿನ ಸದಾಶಿವ ನಗರದಲ್ಲಿ ಇಂದು ರಾತ್ರಿ 9 ಗಂಟೆಗೆ ಸುಮಾರಿಗೆ ನಡೆದಿದೆ. ಕೂಡಲೇ ಐವರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಇಬ್ಬರನ್ನು ಖಾಸಗಿ ಆಸ್ಪತ್ರೆ ರವಾನಿಸಲಾಗಿದೆ.

ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್‌ ಬಳಿ ಭುವನೇಶ್ವರಿ ಮೂರ್ತಿ ಮೆರವಣಿಗೆ ವೇಳೆ ಯುವಕರ ಗುಂಪು ಕುಣಿಯುತ್ತಾ ಸಂಭ್ರಮಿಸುತ್ತಿದ್ದರು. ಈ ವೇಳೆ ಏಕಾಏಕಿ ಗುಂಪಿನಲ್ಲಿ ನುಗ್ಗಿ ಬಂದ ಕೆಲವರು ಜನಸಂದಣಿಯಲ್ಲಿ ಚಾಕು ಹಾಗೂ ಜಂಬೆಗಳಿಂದ ಚುಚ್ಚಿದ್ದಾರೆ. ಯುವಕರು ನೆಲಕ್ಕೆ ಬಿದ್ದು ರಕ್ತಸ್ರಾವದಿಂದ ಒದ್ದಾಡುತ್ತಿದ್ದಂತೆಯೇ ಸ್ಥಳದಿಂದ ಆರೋಪಿಗಳು ಕಾಲ್ಕಿತ್ತಿದ್ದಾರೆ.

ಗಾಯಗೊಂಡವರನ್ನು ಗುರುನಾಥ ವಕ್ಕುಂದ, ಸಚಿನ್ ಕಾಂಬಳೆ, ಲೋಕೇಶ್ ಬೆಟಗೇರಿ, ಮಹೇಶ ಹಾಗೂ ವಿನಾಯಕ ಎಂದು ಗುರುತಿಸಲಾಗಿದೆ.
ತಲೆ, ಹೊಟ್ಟೆ, ಬೆನ್ನು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭೀರವಾಗಿ ಚಾಕು ಏಟು ಬಿದ್ದಿವೆ. ಸ್ಥಳಕ್ಕೆ ಧಾವಿಸಿದ ಎಪಿಎಂಸಿ ಠಾಣೆ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.

ಆಸ್ಪತ್ರೆಗೆ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಪೊಲೀಸ್ ಆಯುಕ್ತರು, ವೈ ಜಂಕ್ಷನ್ ಬಳಿ ರಾಜ್ಯೋತ್ಸವ ಮೆರವಣಿಗೆಯಲ್ಲಿ ಘರ್ಷಣೆ ಆಗಿದೆ. ನಾಲ್ವರಿಗೆ ಜನರಿಗೆ ಚಾಕು ಇರಿತ ಆಗಿದೆ, ಒಬ್ಬರಿಗೆ ತಲೆಗೆ ಗಾಯ ಆಗಿದೆ. ಐದು ಜನರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಲ್ಲಿ ಮೂವರು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರೆ, ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾರು ಹಲ್ಲೆ‌ ಮಾಡಿದ್ದಾರೆ..? ಯಾಕೆ ಮಾಡಿದ್ದಾರೆ..? ಮಾಹಿತಿ ಪಡೆಯುತ್ತಿದ್ದೇವೆ. ಘಟನೆಯಾದ ಜಾಗದಲ್ಲಿ ಸಿಸಿಟಿವಿ ಪರಿಶೀಲನೆ ಕೂಡ ಮಾಡುತ್ತೇವೆ. ಗಾಯಗೊಂಡ ಎಲ್ಲರೂ ನೆಹರು ನಗರದ ನಿವಾಸಿಗಳು ಎಂದರು.

ರಾಜ್ಯೋತ್ಸವದಲ್ಲಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ಜನ ಸೇರಿದ್ದಾರೆ. ಬೆಳಗ್ಗೆಯಿಂದ ಈವರೆಗೆ 3-4 ಲಕ್ಷಕ್ಕೂ ಅಧಿಕ ಜನ ಆಗಮಿಸಿದ್ದರು ಎಂದು ಪೊಲೀಸ್ ಭೂಷಣ ಬೊರಸೆ ತಿಳಿಸಿದರು.

ಶುಕ್ರವಾರ ಮಧ್ಯರಾತ್ರಿಯೇ ಶುರುವಾದ ರಾಜ್ಯೋತ್ಸವ ಸಂಭ್ರಮ ಶನಿವಾರ ಪೂರ್ತಿ ದಿನ ಬೆಳಗಾವಿಯಲ್ಲಿ ಮುಂದುವರಿಯಿತು. ರಾಣಿ ಚನ್ನಮ್ಮ ವೃತ್ತದಲ್ಲಿ ಜನಜಾತ್ರೆ ಕಂಡುಬಂತು. ಅಪಾರ ಸಂಖ್ಯೆಯಲ್ಲಿ ಸೇರಿದ ಜನರಿಂದ ರಸ್ತೆಗಳು, ವೃತ್ತಗಳು ಕಿಕ್ಕಿರಿದು ತುಂಬಿದ್ದವು. ಪರಿಣಾಮ ವೃತ್ತದ ನಾಲ್ಕೂ ದಿಕ್ಕಿನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಕಣ್ಣು ಹಾಯಿಸಿದಲ್ಲಿ ಎಲ್ಲಾ ಕಡೆ ಕೆಂಪು-ಹಳದಿ ಬಾವುಟಗಳು ರಾರಾಜಿಸಿದವು. ಇನ್ನು ಕನ್ನಡ ಶಾಲು ಹೆಗಲ ಮೇಲೆ ಹಾಕಿಕೊಂಡ ಯುವಕ, ಯುವತಿಯರು, ಮಕ್ಕಳು ಕೆನ್ನೆಗಳ ಮೇಲೆ ಕನ್ನಡ ಕೆಂಪು-ಹಳದಿ ಬಣ್ಣ ಬಳಿದುಕೊಂಡು ಸಂಭ್ರಮಿಸಿದರು.