

ಡೈಲಿ ವಾರ್ತೆ: ಫೆ./26/2026

ಗಂಗೊಳ್ಳಿ: ಆಳ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ – ಐವರ ರಕ್ಷಣೆ, ಲಕ್ಷಾಂತರ ರೂ. ನಷ್ಟ

ಕುಂದಾಪುರ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಬೋಟ್ ಕುಂದಾಪುರ, ಗಂಗೊಳ್ಳಿ ನಡುವಿನ ಸಮುದ್ರದಲ್ಲಿ ಮುಳುಗಡೆಯಾದ ಘಟನೆ ಮಂಗಳವಾರ ವರದಿಯಾಗಿದೆ.
ಬೋಟ್‌ನಲ್ಲಿದ್ದ ಐವರು ಮೀನುಗಾರರನ್ನು ಮತ್ತೊಂದು ಬೋಟ್‌ನ ಸಿಬ್ಬಂದಿ ಸಮಯೋಚಿತವಾಗಿ ರಕ್ಷಿಸಿರುವುದರಿಂದ ಸಂಭವನೀಯ ದುರಂತ ತಪ್ಪಿದೆ.
ಕೆಮ್ಮಣ್ಣು ನಿವಾಸಿ ನಾಗರಾಜ್ ಪುತ್ರನ್ ಅವರಿಗೆ ಸೇರಿದ “ಶ್ರೀ ದುರ್ಗಾಪರಮೇಶ್ವರಿ” ಹೆಸರಿನ ಬೋಟ್ ಫೆಬ್ರವರಿ 23ರ ರಾತ್ರಿ ಮಲ್ಪೆ ಬಂದರುದಿಂದ ಮೀನುಗಾರಿಕೆಗೆ ಹೊರಟಿತ್ತು. ಫೆಬ್ರವರಿ 24ರಂದು ಕುಂದಾಪುರ ಮತ್ತು ಗಂಗೊಳ್ಳಿ ನಡುವಿನ ಆಳ ಸಮುದ್ರ ಪ್ರದೇಶದಲ್ಲಿ ಸಂಚರಿಸುತ್ತಿದ್ದ ವೇಳೆ ಬೋಟ್‌ನ ಕೆಳಭಾಗಕ್ಕೆ ಅನಾಮಿಕ ವಸ್ತು ತಾಗಿದ ಪರಿಣಾಮ ಇಂಜಿನ್ ಭಾಗದ ಅಡಿಭಾಗದಲ್ಲಿ ನೀರು ನುಗ್ಗಲಾರಂಭಿಸಿದೆ. ಪರಿಣಾಮ ಇಂಜಿನ್ ಸ್ಥಗಿತಗೊಂಡಿದೆ.
ಬೋಟ್‌ನಲ್ಲಿದ್ದ ಕುಮಟಾ ಮೂಲದ ಪ್ರಕಾಶ್, ರಂಜಿತ್, ರಾಘವೇಂದ್ರ, ರಾಮ ಮತ್ತು ಶ್ರೀನಿವಾಸ ಅವರು ನೀರನ್ನು ಹೊರಹಾಕಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ತಕ್ಷಣವೇ ಸಮೀಪದಲ್ಲಿದ್ದ “ಶ್ರೀ ಕೃಷ್ಣ” ಬೋಟ್‌ನ ಮೀನುಗಾರರು ಹಾಗೂ ಕರಾವಳಿ ಕಾವಲು ಪಡೆಯ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಧಾವಿಸಿ ಐವರು ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದರು.
ನಂತರ ಮುಳುಗುತ್ತಿರುವ ಬೋಟ್ ಅನ್ನು ಹಗ್ಗದಿಂದ ಕಟ್ಟಿ ಗಂಗೊಳ್ಳಿ ಬಂದರಿನತ್ತ ಸುಮಾರು 8–9 ನಾಟಿಕಲ್ ಮೈಲು ಎಳೆದುಕೊಂಡು ಬರಲಾಗುತ್ತಿತ್ತು. ಆದರೆ ಸಮುದ್ರದಲ್ಲಿ ಬೀಸುತ್ತಿದ್ದ ಬಲವಾದ ಗಾಳಿ ಮತ್ತು ಅಲೆಗಳ ಆರ್ಭಟದಿಂದ ಹಗ್ಗ ತುಂಡಾಗಿ ಬೋಟ್ ಸಂಪೂರ್ಣವಾಗಿ ಮುಳುಗಡೆಯಾಗಿದೆ.
ಈ ಘಟನೆಯಿಂದ ಸುಮಾರು 60ರಿಂದ 65 ಲಕ್ಷ ರೂ. ಮೌಲ್ಯದ ನಷ್ಟ ಸಂಭವಿಸಿದೆ ಎಂದು ಬೋಟ್ ಮಾಲೀಕ ನಾಗರಾಜ್ ಪುತ್ರನ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗಂಗೊಳ್ಳಿ ಕರಾವಳಿ ಭದ್ರತಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.