

ಡೈಲಿ ವಾರ್ತೆ: ಫೆ./27/2026

ಶಿವಮೊಗ್ಗ| ಸೈಬರ್ ವಂಚನೆ ಮಹಾಜಾಲ ಬಯಲು: 15 ಬೇನಾಮಿ ಖಾತೆಗಳಲ್ಲಿ ₹82 ಕೋಟಿ ವಹಿವಾಟು, ಮೂವರು ಬಂಧನ

ಶಿವಮೊಗ್ಗ, ಫೆ.27: ಸೈಬರ್ ಅಪರಾಧಗಳಿಗೆ ಸಂಘಟಿತ ರೀತಿಯಲ್ಲಿ ಬ್ಯಾಂಕ್ ಖಾತೆಗಳನ್ನು ಒದಗಿಸಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದ ಮಹಾಜಾಲವನ್ನು ಶಿವಮೊಗ್ಗ ಪೊಲೀಸರು ಬಯಲಿಗೆಳೆದಿದ್ದಾರೆ.
15 ಬೇನಾಮಿ ಹೆಸರಿನಲ್ಲಿದ್ದ ಬ್ಯಾಂಕ್ ಖಾತೆಗಳ ಮೂಲಕ ಸುಮಾರು ₹82 ಕೋಟಿ ಹಣ ವಂಚನೆಗೊಳಗಾಗಿರುವ ಅಚ್ಚರಿ ಮಾಹಿತಿ ತನಿಖೆಯಲ್ಲಿ ಹೊರಬಿದ್ದಿದೆ.
ಈ ಸಂಬಂಧ ಶಿವಮೊಗ್ಗ ಜಿಲ್ಲೆಯ ಶರಾವತಿ ನಗರದ ಜಗದೀಶ್ (43), ಚಿಕ್ಕಮಗಳೂರಿನ ಅರ್ಷಾದ್ (39) ಹಾಗೂ ಶಿವಮೊಗ್ಗ ಹೊಸಮನೆ ಬಡಾವಣೆಯ ಅನಂತ (34)ರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ವಿವಿಧ ವ್ಯಕ್ತಿಗಳ ಹೆಸರಿನಲ್ಲಿ 15 ಬ್ಯಾಂಕ್ ಖಾತೆಗಳನ್ನು ತೆರೆದು ಅವುಗಳನ್ನು ತೆರೆಮರೆಯಲ್ಲಿ ನಿರ್ವಹಿಸುತ್ತಿದ್ದರು. ಈ ಖಾತೆಗಳ ಮೇಲೆ ದೇಶಾದ್ಯಂತ 352 ಕ್ಕೂ ಹೆಚ್ಚು ಸೈಬರ್ ಪ್ರಕರಣಗಳು ದಾಖಲಾಗಿದ್ದು, ಕೋಟ್ಯಂತರ ರೂಪಾಯಿ ಹಣದ ವರ್ಗಾವಣೆ ನಡೆದಿರುವುದು ಪತ್ತೆಯಾಗಿದೆ.
ಸದ್ಯ ತನಿಖೆಯಲ್ಲಿ 15 ಖಾತೆಗಳಲ್ಲಿ ಒಟ್ಟು ₹14 ಕೋಟಿ 71 ಲಕ್ಷ ರೂಪಾಯಿ ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿ ಡ್ರಾ ಮಾಡಿರುವುದು ದೃಢಪಟ್ಟಿದೆ.
ಆರೋಪಿಗಳಿಂದ 2 ಮೊಬೈಲ್ ಫೋನ್‌ಗಳು, 11 ಎಟಿಎಂ ಕಾರ್ಡ್‌ಗಳು, 9 ಕ್ಯೂಆರ್ ಕೋಡ್ ಸ್ಕ್ಯಾನರ್‌ಗಳು ಹಾಗೂ 15 ಏರ್‌ಟೆಲ್ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಲ್ಸನ್ ಎಂಬವರು ನೀಡಿದ ವಂಚನೆ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಈ ಬೇನಾಮಿ ಖಾತೆಗಳ ಜಾಲ ಪತ್ತೆಯಾಗಿದೆ.
ಈ ಸಂಬಂಧ ಶಿವಮೊಗ್ಗ ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.