

ಡೈಲಿ ವಾರ್ತೆ: ಫೆ./27/2026

ಕೋಟ: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ – ಐವರು ಪ್ರಾಣಾಪಾಯದಿಂದ ಪಾರು!

ಕೋಟ: ತಾಂತ್ರಿಕ ದೋಷದಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಟ್ರಾವೆಲರ್ (ಟಿಟಿ) ವಾಹನವೊಂದು ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಪೆಟ್ರೋಲ್ ಬಂಕ್ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ. ಅದೃಷ್ಟವಶಾತ್ ಈ ಭೀಕರ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಘಟನೆಯ ವಿವರ:
ಕುಂದಾಪುರದಿಂದ ಉಡುಪಿಯ ಶೋರೂಂಗೆ ದುರಸ್ತಿಗಾಗಿ ತೆರಳುತ್ತಿದ್ದ ಟೆಂಪೋ ಟ್ರಾವೆಲರ್, ಕೋಟ ಸಮೀಪಿಸುತ್ತಿದ್ದಂತೆ ಏಕಾಏಕಿ ಇಂಜಿನ್ ಕ್ರ್ಯಾಂಕ್ ಕಟ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದೆ. ವೇಗವಾಗಿದ್ದ ವಾಹನವು ರಸ್ತೆಯ ಮಧ್ಯದ ಡಿವೈಡರ್‌ನಲ್ಲಿದ್ದ ವಿದ್ಯುತ್ ಕಂಬಕ್ಕೆ ಬಲವಾಗಿ ಡಿಕ್ಕಿ ಹೊಡೆದು, ಡಿವೈಡರ್ ಹಾರಿ ವಿರುದ್ಧ ದಿಕ್ಕಿನ ರಸ್ತೆಗೆ ನುಗ್ಗಿದೆ. ಈ ವೇಳೆ ಉಡುಪಿಯಿಂದ ಕುಂದಾಪುರ ಕಡೆಗೆ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಟಿಟಿ ವಾಹನ ರಸ್ತೆಯಲ್ಲೇ ಪಲ್ಟಿಯಾಗಿದೆ.

ತಪ್ಪಿದ ಭಾರಿ ದುರಂತ:
ಅಪಘಾತದ ಸಮಯದಲ್ಲಿ ಟಿಟಿ ವಾಹನದಲ್ಲಿ ಚಾಲಕ ಮಾತ್ರ ಇದ್ದಿದ್ದರಿಂದ ದೊಡ್ಡ ಮಟ್ಟದ ಜೀವಹಾನಿ ತಪ್ಪಿದೆ. ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಡಿಕ್ಕಿಗೊಳಗಾದ ಕಾರಿನಲ್ಲಿ ಮಂಗಳೂರಿನಿಂದ ಹೆಮ್ಮಾಡಿಗೆ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಪ್ರಯಾಣಿಕರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಜಖಂಗೊಂಡಿದೆ.
ಕುತೂಹಲಕ್ಕೆ ಬಿದ್ದಿತು ಮತ್ತೊಂದು ಸರಣಿ ಅಪಘಾತ:

ಈ ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಸ್ಥಳಕ್ಕೆ ಧಾವಿಸಿದ ಕೋಟ ಪೊಲೀಸ್ ಉಪನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್. ಅವರು ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಲು ಮುಂದಾದರು.
ಆದರೆ, ಈ ಸಂದರ್ಭದಲ್ಲಿ ಕುಂದಾಪುರದಿಂದ ಉಡುಪಿ ಕಡೆಗೆ ಚಲಿಸುತ್ತಿದ್ದ ಬ್ರೇಝಾ ಮತ್ತು ಆಲ್ಟೊ ಕಾರಿನ ಚಾಲಕರು ಅಪಘಾತದ ದೃಶ್ಯವನ್ನು ನೋಡುತ್ತಾ ಸಾಗುತ್ತಿದ್ದರು. ಈ ವೇಳೆ ಮುಂದುಗಡೆ ಇದ್ದ ಕಾರಿನ ಚಾಲಕ ಹಠಾತ್ತನೆ ಬ್ರೇಕ್ ಹಾಕಿದ ಪರಿಣಾಮ, ಹಿಂದಿನ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಮತ್ತೊಂದು ಸರಣಿ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಕಾರುಗಳು ಜಖಂಗೊಂಡಿವೆಯಾದರೂ ಯಾರಿಗೂ ಗಾಯಗಳಾಗಿಲ್ಲ.
ಪ್ರಸ್ತುತ ಕೋಟ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.