ಡೈಲಿ ವಾರ್ತೆ: ಫೆ./28/2026

ಹೋಳಿ ಹಬ್ಬದಂದೇ ಕೇತುಗ್ರಸ್ತ ರಕ್ತಚಂದ್ರಗಹಣ: ಮಾ.3ರಂದು ಬಾನಂಗಳದಲ್ಲಿ ಕೆಂಪು ಚಂದಿರದ ವಿಸ್ಮಯ

ಬೆಂಗಳೂರು, ಫೆ.28: ಮಾ.3ರಂದು ಅಪರೂಪದ ಕೇತುಗ್ರಸ್ತ ರಕ್ತಚಂದ್ರಗಹಣ ಸಂಭವಿಸಲಿದ್ದು, ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ಅದ್ಭುತ ದೃಶ್ಯ ಕಾಣಿಸಲಿದೆ.

ಪಾಲ್ಗುಣ ಮಾಸದ ಹುಣ್ಣಿಮೆಯ ದಿನವೇ ಈ ಚಂದ್ರಗ್ರಹಣ ಸಂಭವಿಸುತ್ತಿದ್ದು, ಭಾರತದಲ್ಲಿಯೂ ಇದರ ಗೋಚರತೆ ಇರಲಿದೆ. ಕರ್ನಾಟಕದಲ್ಲಿಯೂ ಸುಮಾರು 25 ನಿಮಿಷಗಳ ಕಾಲ ರಕ್ತಚಂದ್ರನ ದೃಶ್ಯ ಕಾಣಿಸಿಕೊಳ್ಳಲಿದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಭಾರತೀಯ ಕಾಲಮಾನ ಪ್ರಕಾರ ಮಾ.3ರಂದು ಮಧ್ಯಾಹ್ನ 3:20ಕ್ಕೆ ಗ್ರಹಣ ಆರಂಭವಾಗಿ ಸಂಜೆ 6:47ಕ್ಕೆ ಮುಕ್ತಾಯವಾಗಲಿದೆ. ಗ್ರಹಣದ ಅವಧಿಯಲ್ಲಿ ಚಂದ್ರನು ಕೆಂಪು ವರ್ಣದಲ್ಲಿ ಕಾಣಿಸಿಕೊಳ್ಳುವ ಹಿನ್ನೆಲೆಯಲ್ಲಿ ಇದು “ರಕ್ತಚಂದ್ರಗಹಣ” ಎಂದು ಕರೆಯಲ್ಪಡುತ್ತದೆ.

ಹೋಳಿ ಹಬ್ಬದ ಸಂಭ್ರಮದ ನಡುವೆ ಈ ಅಪರೂಪದ ಖಗೋಳ ಘಟನೆಯು ಜನರಲ್ಲಿ ವಿಶೇಷ ಕುತೂಹಲ ಮೂಡಿಸಿದೆ. ಖಗೋಳಾಸಕ್ತರು ಮತ್ತು ಸಾಮಾನ್ಯ ನಾಗರಿಕರು ಸುರಕ್ಷಿತವಾಗಿ ಈ ಪ್ರಕೃತಿ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ.