ಡೈಲಿ ವಾರ್ತೆ: ಫೆ./28/2026

ಹಂಸಲೇಖರ ಸಂಗೀತ ಸಾಧನೆಗೆ ಶೈಕ್ಷಣಿಕ ಗೌರವ: ಬೆಂಗಳೂರು ವಿಶ್ವವಿದ್ಯಾಲಯದಿಂದ
ಈಶ್ವರ್‌ಗೆ ಡಾಕ್ಟರೇಟ್ ಪದವಿ ಪ್ರದಾನ

ಬೆಂಗಳೂರು, ಫೆ.28: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ನಿವಾಸಿ ದಿವಂಗತ ಸಿ. ತಿಪ್ಪಣ್ಣ ಮತ್ತು ದಿವಂಗತ ಶ್ರೀಮತಿ ಸಿ. ಹುಲಿಗೇಮ್ಮ ದಂಪತಿಯ ಹಿರಿಯ ಪುತ್ರ ಈಶ್ವರ್ ಅವರು ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದ ಪಿಎಚ್.ಡಿ ಪದವಿ ಪಡೆದಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ಹಿರಿಯ ಪ್ರಾಧ್ಯಾಪಕರು ಹಾಗೂ ಪ್ರಸ್ತುತ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ (ಕೋಲಾರ) ಕುಲಪತಿಗಳಾದ ಪ್ರೊ. ಬಿ.ಕೆ. ರವಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಕನ್ನಡ ಚಿತ್ರರಂಗಕ್ಕೆ ಹಂಸಲೇಖ ರವರ ಕೊಡುಗೆ: ಒಂದು ಅಧ್ಯಯನ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ ಎಂದು ವಿಶ್ವವಿದ್ಯಾಲಯ ಪ್ರಕಟಣೆ ತಿಳಿಸಿದೆ.

ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿದ ಅಪಾರ ಕೊಡುಗೆಗಳನ್ನು ಸಮಗ್ರವಾಗಿ ವಿಶ್ಲೇಷಿಸಿದ ಈ ಮಹಾಪ್ರಬಂಧವು ಕನ್ನಡ ಸಿನಿಮಾ ಅಧ್ಯಯನ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲಾಗಿ ಪರಿಗಣಿಸಲಾಗುತ್ತಿದೆ.
ಹಿನ್ನೆಲೆಯಲ್ಲಿ, ಈಶ್ವರ್ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ವಿಶ್ವವಿದ್ಯಾಲಯಕ್ಕೆ 5ನೇ ರ‍್ಯಾಂಕ್ ಪಡೆದು ಗಮನ ಸೆಳೆದಿದ್ದರು. ನಂತರ ರಾಜ್ಯದ ವಿವಿಧ ಪ್ರತಿಷ್ಠಿತ ದಿನಪತ್ರಿಕೆಗಳು ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿ ವೃತ್ತಿಪರ ಅನುಭವ ಹೊಂದಿದ್ದಾರೆ.

ಈ ಮಹತ್ವದ ಶೈಕ್ಷಣಿಕ ಸಾಧನೆಗೆ ಕುಟುಂಬಸ್ಥರು, ಗುರು-ಹಿರಿಯರು, ಸ್ನೇಹಿತರು ಹಾಗೂ ಸಿರಿಗೇರಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಕನ್ನಡ ಚಿತ್ರರಂಗದ ಪರಿಣಿತರು, ಸಿನಿಮಾ ಪತ್ರಕರ್ತರು, ಕಲಾವಿದರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಸಹ ಈ ಸಂಶೋಧನಾ ಕಾರ್ಯವನ್ನು ಪ್ರಶಂಸಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರರಂಗದ ಸಂಗೀತ ಮತ್ತು ಸಾಹಿತ್ಯ ಪರಂಪರೆಯನ್ನು ಶೈಕ್ಷಣಿಕವಾಗಿ ದಾಖಲಿಸಿರುವ ಈ ಸಂಶೋಧನೆ ಭವಿಷ್ಯದ ಸಿನಿಮಾ ಅಧ್ಯಯನಗಳಿಗೆ ದಾರಿದೀಪವಾಗಲಿದೆ.