ಡೈಲಿ ವಾರ್ತೆ: ಫೆ./28/2026

ಮಲ್ಪೆ ಬಂದರು ಕಾರ್ಮಿಕನ ಮೇಲೆ ಹಲ್ಲೆ ಖಂಡನೆ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಡಿಟಿಯು ಆಗ್ರಹ

ಉಡುಪಿ, ಫೆ.28: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಏಲಂ ಮಾಡುವ ಕಾರ್ಮಿಕ ಅಯ್ಯೂಬ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್‌ಡಿಟಿಯು) ಉಡುಪಿ ಜಿಲ್ಲಾ ನಿಯೋಗ ಅಯ್ಯೂಬ್ ಅವರ ಸ್ವಗೃಹಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿತು.

ಈ ವೇಳೆ ಪತ್ರಿಕಾ ಪ್ರಕಟಣೆ ನೀಡಿದ ಎಸ್‌ಡಿಟಿಯು ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಖಾದರ್ ಕಾಪು, ಹಲ್ಲೆ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದರು. ಪ್ರಕರಣದಲ್ಲಿ ಆರೋಪಿಗಳು ಎಷ್ಟೇ ಪ್ರಭಾವಿಗಳಾದರೂ ಪೊಲೀಸರವರು ಯಾವುದೇ ಒತ್ತಡಕ್ಕೆ ಮಣಿಯದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾರ್ಮಿಕರ ಭದ್ರತೆಯನ್ನು ಖಾತ್ರಿಪಡಿಸುವ ಜವಾಬ್ದಾರಿ ಸಂಬಂಧಪಟ್ಟ ಇಲಾಖೆಯದ್ದಾಗಿದ್ದು, ಮಲ್ಪೆ ಬಂದರು ಪ್ರದೇಶದಲ್ಲಿ ಇಂತಹ ದೌರ್ಜನ್ಯಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಹಲ್ಲೆಗೊಳಗಾದ ಅಯ್ಯೂಬ್ ಅವರ ಜೊತೆ ನ್ಯಾಯಪರ ಹೋರಾಟದಲ್ಲಿ ಎಸ್‌ಡಿಟಿಯು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ನ್ಯಾಯ ದೊರಕಿಸಿಕೊಡಬೇಕೆಂದು ತಿಳಿಸಿದರು.

ನಿಯೋಗದಲ್ಲಿ ಎಸ್‌ಡಿಟಿಯು ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಖಾದರ್ ಕಾಪು, ಉಪಾಧ್ಯಕ್ಷ ರಫೀಕ್ ಪೊಲಿಪು, ಜೊತೆ ಕಾರ್ಯದರ್ಶಿ ಕಲೀಲ್ ಉಚ್ಚಿಲ ಹಾಗೂ ಜಿಲ್ಲಾ ಸಮಿತಿ ಸದಸ್ಯ ಲಿಯಾಕತ್ ಉಪಸ್ಥಿತರಿದ್ದರು.