



ಡೈಲಿ ವಾರ್ತೆ: ಫೆ./28/2026

ಕುಡಿದ ನಶೆಯಲ್ಲಿ ಕಾರು ಹರಿಸಿ ಅಸಿಸ್ಟೆಂಟ್ ಲೇಬರ್ ಇನ್ಸ್‌ಪೆಕ್ಟರ್ ಹತ್ಯೆ: ಮೂವರು ಕಾಲೇಜು ವಿದ್ಯಾರ್ಥಿಗಳ ಬಂಧನ

ಆನೇಕಲ್, ಫೆಬ್ರವರಿ 28: ರಾಜ್ಯ ಗಡಿಭಾಗದ ಹೊಸೂರು ನಗರದಲ್ಲಿ ಕುಡಿದ ನಶೆಯಲ್ಲಿ ಕಾರು ಚಲಾಯಿಸಿದ್ದ ಮೂವರು ಕಾಲೇಜು ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿ ವ್ಯಕ್ತಿಯೊಬ್ಬರ ಮೇಲೆ ವಾಹನ ಹರಿಸಿ ಹತ್ಯೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಮೃತರನ್ನು ಶಿವಮೂರ್ತಿ (54) ಎಂದು ಗುರುತಿಸಲಾಗಿದ್ದು, ಅವರು ಹೊಸೂರಿನ ಅಣ್ಣೈ ಅರವಿಂದ್ ನಗರದ ನಿವಾಸಿ ಹಾಗೂ ಅಸಿಸ್ಟೆಂಟ್ ಲೇಬರ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಪೊಲೀಸರ ಮಾಹಿತಿ ಪ್ರಕಾರ, ಕುಡಿದ ನಶೆಯಲ್ಲಿದ್ದ ಆರೋಪಿಗಳು ಮೊದಲು ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ ಶಿವಮೂರ್ತಿ ಅವರು ತಮ್ಮ ಮನೆಯ ಮುಂದೆ ಬೈಕ್ ನಿಲ್ಲಿಸಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಮೂವರು ವಿದ್ಯಾರ್ಥಿಗಳು ಅವರ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಕೋಪಗೊಂಡ ಶಿವಮೂರ್ತಿ ಹಾಗೂ ಕುಟುಂಬಸ್ಥರು ಪ್ರಶ್ನಿಸಿದಾಗ ಪರಸ್ಪರ ವಾಗ್ವಾದ ನಡೆದಿದೆ.
ಈ ವೇಳೆ ಆರೋಪಿಗಳು ಏಕಾಏಕಿ ಕಾರನ್ನು ಮುಂದೆ ಚಲಾಯಿಸಿ ಶಿವಮೂರ್ತಿ ಅವರ ಮೇಲೆಯೇ ಹರಿಸಿದ್ದರೆಂದು ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಶಿವಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಶಿವಮೂರ್ತಿ ಅವರ ಮಗ, ಸೊಸೆ ಮತ್ತು ಮೊಮ್ಮಗ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣ ಸಂಬಂಧ ಆದಿತ್ಯ (20), ರಿತಿಕ್ ಕುಮಾರ್ (19) ಹಾಗೂ ಹರೀಶ್ (19) ಎಂಬ ಮೂವರನ್ನು ಹೊಸೂರು ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.