


ಡೈಲಿವಾರ್ತೆ: 24/ನ./2026




ಆನೆಗುಡ್ಡೆ ಬಳಿ ಟ್ಯಾಂಕರ್ಗೆ ಡಿಕ್ಕಿ ಹೊಡೆದು ಡಿವೈಡರ್ಗೆ ಅಪ್ಪಳಿಸಿದ ಬಸ್: ಹಲವರಿಗೆ ಗಾಯ

ಕುಂದಾಪುರ: ಉಡುಪಿಯಲ್ಲಿ ನಡೆದ ಕಾಂಗ್ರೆಸ್ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಪ್ರವಾಸಿ ಬಸ್ಸೊಂದು ಅಪಘಾತಕ್ಕೀಡಾಗಿ ಹಲವರು ಗಾಯಗೊಂಡ ಘಟನೆ ಮಂಗಳವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 66ರ ಆನೆಗುಡ್ಡೆ ಸ್ವಾಗತ ಗೋಪುರದ ಬಳಿ ಸಂಭವಿಸಿದೆ.

ಮಂಗಳವಾರ ಉಡುಪಿಯಲ್ಲಿ ನಡೆದ ಕಾಂಗ್ರೆಸ್ ಗ್ಯಾರಂಟಿ ಸಮಾವೇಶಕ್ಕೆ ತ್ರಾಸಿಯಿಂದ 30 ಮಂದಿ ಪ್ರಯಾಣಿಕರನ್ನು ಹೊತ್ತ ಟೂರಿಸ್ಟ್ ಬಸ್ ತೆರಳಿತ್ತು. ಸಮಾವೇಶ ಮುಗಿದ ಬಳಿಕ ಹಿಂದಿರುಗುವ ಮಾರ್ಗದಲ್ಲಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಊಟ ಮುಗಿಸಿ ತ್ರಾಸಿಗೆ ಪ್ರಯಾಣ ಬೆಳೆಸಿತ್ತು.
ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಪ್ರವೇಶಿಸಿ ಕುಂದಾಪುರದ ಕಡೆಗೆ ತೆರಳಲು ಚಾಲಕ ಬಸ್ಸನ್ನು ತಿರುಗಿಸುತ್ತಿದ್ದಾಗ, ಮಂಗಳೂರಿನಿಂದ ಕುಂದಾಪುರದ ಕಡೆಗೆ ವೇಗವಾಗಿ ಬರುತ್ತಿದ್ದ ಎರಡು ಬುಲೆಟ್ ಟ್ಯಾಂಕರ್ಗಳ ಪೈಕಿ ಒಂದು ಟ್ಯಾಂಕರ್ ಬಸ್ಸಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದೆ. ಈ ವೇಳೆ ಟ್ಯಾಂಕರ್ ಬಸ್ಸಿನ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ನಿಂತಿದೆ ಎಂದು ತಿಳಿದುಬಂದಿದೆ.

ಅಪಘಾತದಿಂದ ಬಸ್ಸಿನ ಮುಂಭಾಗ ಜಖಂಗೊಂಡಿದ್ದು, ಬಸ್ಸಿನಲ್ಲಿದ್ದ ಹಲವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

