ಡೈಲಿವಾರ್ತೆ: 24/ನ./2026

ಮೂರು ವರ್ಷಗಳ ಪ್ರೀತಿ ದುರಂತ ಅಂತ್ಯ: ಮದುವೆ ವಿಚಾರದ ಗಲಾಟೆ ನಡುವೆ ಲಾಡ್ಜ್‌ನಿಂದ ಯುವತಿಯನ್ನು ತಳ್ಳಿ ಹತ್ಯೆ ಆರೋಪ – ಪ್ರಿಯಕರ ಬಂಧನ!

ಬೆಂಗಳೂರು: ಪ್ರೀತಿಸಿ ಮದುವೆಯಾಗುವ ಭರವಸೆ ನೀಡಿದ್ದ ಯುವತಿಯನ್ನು ಲಾಡ್ಜ್‌ನ ಮೂರನೇ ಮಹಡಿಯ ಕಿಟಕಿಯಿಂದ ಕೆಳಕ್ಕೆ ತಳ್ಳಿ ಹತ್ಯೆಗೈದ ಆರೋಪದ ಮೇಲೆ ಆಕೆಯ ಪ್ರಿಯಕರನನ್ನು ಗಂಗಮ್ಮನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಾಸನ ಮೂಲದ ಐಶ್ವರ್ಯಾ (23) ಮೃತಪಟ್ಟ ಯುವತಿ. ನವೆಂಬರ್ 19ರಂದು ಅಬ್ಬಿಗೆರೆ ಸರ್ಕಲ್‌ನಲ್ಲಿರುವ ಲಾಡ್ಜ್‌ನಲ್ಲಿ ಈ ಘಟನೆ ನಡೆದಿದ್ದು, ಆರಂಭದಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಯುವತಿಯ ತಂದೆ ನೀಡಿದ ದೂರಿನ ಬಳಿಕ ಮಹತ್ವದ ಸುಳಿವುಗಳು ಲಭ್ಯವಾಗಿವೆ. ಈ ಹಿನ್ನೆಲೆಯಲ್ಲಿ ಆಕೆಯ ಪ್ರಿಯಕರ ಸಂತೋಷ್‌ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಐಶ್ವರ್ಯಾ, ಘಟನೆ ನಡೆದ ದಿನ ಸಂದರ್ಶನಕ್ಕೆ ತೆರಳುವುದಾಗಿ ಮನೆಯಲ್ಲಿ ತಿಳಿಸಿ ಹೊರಬಂದಿದ್ದಳು. ಬಳಿಕ ಸಂತೋಷ್‌ನನ್ನು ಭೇಟಿಯಾಗಲು ಅಬ್ಬಿಗೆರೆ ಸರ್ಕಲ್‌ನ ಲಾಡ್ಜ್‌ಗೆ ತೆರಳಿದ್ದಳು. ಮಧ್ಯಾಹ್ನ ಇಬ್ಬರೂ ಕೊಠಡಿ ಪಡೆದುಕೊಂಡಿದ್ದು, ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಅವರ ನಡುವೆ ಯಾವುದೋ ವಿಚಾರಕ್ಕೆ ತೀವ್ರ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಸಂತೋಷ್ ಯುವತಿಯನ್ನು ಬಲವಾಗಿ ತಳ್ಳಿದ ಪರಿಣಾಮ ಆಕೆ ಮೂರನೇ ಮಹಡಿಯ ಕಿಟಕಿಯಿಂದ ಕೆಳಕ್ಕೆ ಬಿದ್ದಿದ್ದಾಳೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಕೆಳಗೆ ಬಿದ್ದ ವೇಳೆ ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಗಂಭೀರವಾಗಿ ಗಾಯಗೊಂಡಿದ್ದ ಐಶ್ವರ್ಯಾಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಳು. ಘಟನೆಯ ಆರಂಭದಲ್ಲಿ ಸಾವಿನ ಹಿಂದಿನ ನಿಖರ ಕಾರಣ ತಿಳಿದುಬಂದಿರಲಿಲ್ಲ. ಇದೀಗ ತಂದೆ ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು, ಘಟನೆಯ ವೇಳೆ ಯುವತಿಯೊಂದಿಗಿದ್ದ ಸಂತೋಷ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮದುವೆ ವಿಚಾರವಾಗಿ ಮೂರು ವರ್ಷಗಳಿಂದ ಮನಸ್ತಾಪ:

ಐಶ್ವರ್ಯಾ ಹಾಗೂ ಸಂತೋಷ್ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆರಂಭದಲ್ಲಿ ಈ ಸಂಬಂಧಕ್ಕೆ ಯುವತಿಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರೂ, ಸಂತೋಷ್‌ನನ್ನೇ ವಿವಾಹವಾಗುವುದಾಗಿ ಐಶ್ವರ್ಯಾ ಪಟ್ಟು ಹಿಡಿದಿದ್ದಳು. ಕೊನೆಗೆ ಕುಟುಂಬದವರು ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಆದರೆ, ಮದುವೆಯ ಪ್ರಸ್ತಾಪ ಬಂದಾಗ ಸಂತೋಷ್ ಮೂರು ವರ್ಷಗಳ ಕಾಲಾವಕಾಶ ಕೇಳಿದ್ದ ಎನ್ನಲಾಗಿದೆ.

ನಿಗದಿತ ಅವಧಿ ಕಳೆದರೂ ಮದುವೆಗೆ ಮುಂದಾಗದ ಸಂತೋಷ್, ಮನೆಯವರ ಒಪ್ಪಿಗೆ ಇಲ್ಲ ಎಂಬ ಕಾರಣ ನೀಡಿ ವಿವಾಹವನ್ನು ಮುಂದೂಡುತ್ತಿದ್ದ. ಇದೇ ವೇಳೆ ಐಶ್ವರ್ಯಾಳ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ತನ್ನ ಬಳಿ ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಈ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆದು ರಾಜಿ ಸಂಧಾನ ಮಾಡಲಾಗಿತ್ತು. ಬಳಿಕ ಮದುವೆ ನೆರವೇರಿಸಲು ನಿರ್ಧರಿಸಲಾಗಿತ್ತು. ಆದರೆ, ಸಂತೋಷ್ ಮತ್ತೆ ಆರು ತಿಂಗಳ ಕಾಲಾವಕಾಶ ಕೇಳಿದ್ದ. ನಂತರ ವಿವಾಹವಾಗಲು ನಿರಾಕರಿಸಿ ಐಶ್ವರ್ಯಾಳ ಮನೆಯ ಬಳಿಯೇ ಗಲಾಟೆ ನಡೆಸಿದ್ದ ಎನ್ನಲಾಗಿದೆ.

ಈ ಬೆಳವಣಿಗೆಗಳಿಂದ ಬೇಸತ್ತಿದ್ದ ಐಶ್ವರ್ಯಾ, ಸಂತೋಷ್‌ನಿಂದ ದೂರವಿರಲು ಪ್ರಯತ್ನಿಸುತ್ತಿದ್ದಳು. ಆದರೂ ಆತ ಪದೇಪದೇ ಭೇಟಿಯಾಗುವಂತೆ ಒತ್ತಡ ಹೇರುತ್ತಿದ್ದ ಎಂದು ಕುಟುಂಬಸ್ಥರು ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ನಡೆದ ದಿನವೂ ಇದೇ ವಿಚಾರವಾಗಿ ಇಬ್ಬರ ನಡುವೆ ಸಂಘರ್ಷ ಉಂಟಾಗಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಲಾಡ್ಜ್ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹ:

ನವೆಂಬರ್ 19ರಂದು ಮಧ್ಯಾಹ್ನ ಸಂತೋಷ್ ಹಾಗೂ ಐಶ್ವರ್ಯಾ ಒಟ್ಟಿಗೆ ಲಾಡ್ಜ್‌ಗೆ ಆಗಮಿಸಿದ್ದರು. ಅಬ್ಬಿಗೆರೆ ವಿಳಾಸ ಹೊಂದಿದ್ದ ಸಂತೋಷ್, ಲಾಡ್ಜ್‌ನ ನೋಂದಣಿ ಪುಸ್ತಕದಲ್ಲಿ ವಿವರ ದಾಖಲಿಸಿ ಕೊಠಡಿ ಪಡೆದಿದ್ದ. ರಾತ್ರಿ ನಡೆದ ಘಟನೆ ಕುರಿತು ಪ್ರತಿಕ್ರಿಯಿಸಿರುವ ಲಾಡ್ಜ್ ಸಿಬ್ಬಂದಿ, ಇಬ್ಬರ ನಡುವೆ ಗಲಾಟೆ ನಡೆದಿರುವುದು ತಮ್ಮ ಗಮನಕ್ಕೆ ಬಂದಿರಲಿಲ್ಲ. ಕಟ್ಟಡದ ಮೇಲ್ಭಾಗದಲ್ಲಿಯೂ ಮತ್ತೊಂದು ಕಟ್ಟಡವಿರುವುದರಿಂದ ಶಬ್ದ ಕೇಳಿಸಿರಲಿಕ್ಕಿಲ್ಲ. ಯುವತಿ ಯಾವ ರೀತಿಯಲ್ಲಿ ಕೆಳಕ್ಕೆ ಬಿದ್ದಳು ಎಂಬುದು ತಮಗೆ ತಿಳಿದಿಲ್ಲ. ಘಟನೆ ಬಗ್ಗೆ ಮಾಹಿತಿ ದೊರೆತ ಕೂಡಲೇ ಪೊಲೀಸರಿಗೆ ತಿಳಿಸಿರುವುದಾಗಿ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಯಶವಂತಪುರ ವಿಭಾಗದ ಡಿಸಿಪಿ ನಾಗೇಶ್ ಡಿ.ಎಲ್., ಇಬ್ಬರಿಗೂ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದ್ದರೂ, ಆರೋಪಿ ಮದುವೆಗೆ ಸಮ್ಮತಿಸಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇಬ್ಬರ ನಡುವೆ ನಡೆದ ಗಲಾಟೆಯ ಸಂದರ್ಭದಲ್ಲಿ ಸಂತೋಷ್ ಯುವತಿಯನ್ನು ತಳ್ಳಿದ ಪರಿಣಾಮ ಆಕೆ ಕೆಳಕ್ಕೆ ಬಿದ್ದು ಮೃತಪಟ್ಟಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಹತ್ಯೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಕೃತ್ಯದ ಹಿಂದಿನ ನಿಖರ ಕಾರಣ ಹಾಗೂ ಇತರ ಅಂಶಗಳ ಕುರಿತು ಹೆಚ್ಚಿನ ವಿಚಾರಣೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.