

ಡೈಲಿವಾರ್ತೆ:19/ಮಾರ್ಚ್/2026


ಕೋಟ: ಈಜಲು ಹೋದ ವ್ಯಕ್ತಿ ಕಲ್ಲು ಕೋರೆಯಲ್ಲಿ ಜಲಸಮಾಧಿ – ಈಶ್ವರ್ ಮಲ್ಪೆ ತಂಡದಿಂದ ಶವ ಪತ್ತೆ

ಕೋಟ: ಮೃತ್ಯುಕೂಪವಾಗಿ ಪರಿಣಮಿಸುತ್ತಿರುವ ಪಾಳುಬಿದ್ದ ಕಲ್ಲುಕೋರೆಗಳು ಮತ್ತೆ ಒಂದು ಅಮಾಯಕ ಜೀವವನ್ನು ಕಸಿದುಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗರಿಕೆ ಮಠದಲ್ಲಿ ಗುರುವಾರ ನಡೆದಿದೆ.
ತಮಿಳುನಾಡು ಮೂಲದ ಅರುಣ್ (38) ಎಂಬ ಕಾರ್ಮಿಕ ಈ ದುರ್ಘಟನೆಯಲ್ಲಿ ಮೃತಪಟ್ಟವರಾಗಿದ್ದು, ಸ್ಥಳೀಯವಾಗಿ ರಾಜ ಎಂಬವರ ಬಳಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಗುರುವಾರ ಮಧ್ಯಾಹ್ನ ಗರಿಕೆ ಮಠದ ಬಳಿಯಿರುವ ಆಳವಾದ ಕಲ್ಲುಕೋರೆಗೆ ಈಜಲು ಇಳಿದ ಅರುಣ್, ನೀರಿನ ಆಳದ ಅಂದಾಜು ಮಾಡದೆ ಮುಳುಗಿದ್ದಾನೆ ಎಂದು ತಿಳಿದುಬಂದಿದೆ. ಸುಮಾರು 30 ಅಡಿಗಿಂತ ಹೆಚ್ಚು ಆಳವಿರುವ ಈ ಕೋರೆಯಲ್ಲಿ ಮೃತದೇಹವನ್ನು ಪತ್ತೆಹಚ್ಚುವುದು ಸ್ಥಳೀಯರಿಗೆ ದೊಡ್ಡ ಸವಾಲಾಗಿತ್ತು.
ಸುದ್ದಿ ತಿಳಿದ ತಕ್ಷಣ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಅವರ ತಂಡ ಸ್ಥಳಕ್ಕೆ ಆಗಮಿಸಿ ಸಾಹಸಮಯ ಕಾರ್ಯಾಚರಣೆ ನಡೆಸಿದರು. ದೀರ್ಘ ಕಾಲದ ಹುಡುಕಾಟದ ಬಳಿಕ ಕೊನೆಗೆ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.
ಘಟನಾ ಸ್ಥಳಕ್ಕೆ ಧಾವಿಸಿದ ಬ್ರಹ್ಮಾವರ ಠಾಣಾ ಪೊಲೀಸರು ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಇಂತಹ ಅಪಾಯಕಾರಿ ಪಾಳುಬಿದ್ದ ಕಲ್ಲುಕೋರೆಗಳ ಸುತ್ತ ಸೂಕ್ತ ಸುರಕ್ಷತಾ ಕ್ರಮಗಳ ಕೊರತೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗುತ್ತಿದೆ.