ಡೈಲಿವಾರ್ತೆ:19/ಮಾರ್ಚ್/2026

ಕುಂದಾಪುರ: ​ಕೋಟೆ ಕೋಡಿ ಹಸಿರು ಮಸೀದಿಯಲ್ಲಿ ಸೌಹಾರ್ದ ಇಫ್ತಾರ್ ಕೂಟ: ವಿವಿಧತೆಯಲ್ಲಿ ಏಕತೆಯ ಸಂದೇಶ

​ಕುಂದಾಪುರ: ಇಲ್ಲಿನ ಕೋಟೆ ಕೋಡಿಯ ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಶನ್ ವತಿಯಿಂದ ಬದ್ರಿಯಾ ಜುಮ್ಮಾ ಮಸೀದಿಯ ವಠಾರದಲ್ಲಿ ಇತ್ತೀಚೆಗೆ ‘ಗ್ರ್ಯಾಂಡ್ ಸೌಹಾರ್ದ ಇಫ್ತಾರ್ ಮೀಟ್’ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಸಮುದಾಯಗಳ ನಡುವೆ ಸಾಮರಸ್ಯ ಮತ್ತು ಬಾಂಧವ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಈ ಕೂಟದಲ್ಲಿ ವಿವಿಧ ಧರ್ಮಗಳ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಿ ಭಾವೈಕ್ಯತೆಯನ್ನು ಮೆರೆದರು.

​ಮಾನವೀಯತೆಯೇ ಧರ್ಮದ ಮೂಲ: ಎಂ.ಎ. ಗಫೂರ್

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, “ಬ್ಯಾರಿಸ್ ಸಂಸ್ಥೆಯ ಹಾಜಿ ಮೊಹಮ್ಮದ್ ಬ್ಯಾರಿಯವರು ನಿರ್ಮಿಸಿದ ಈ ಭಾಗದ ಶೈಕ್ಷಣಿಕ ಸಂಸ್ಥೆಗಳು ಹಾಗೂ ಪರಿಸರ ಸ್ನೇಹಿ ‘ಹಸಿರು ಮಸೀದಿ’ಯಲ್ಲಿ ಇಫ್ತಾರ್ ಕೂಟ ಆಯೋಜಿಸಿರುವುದು ಶ್ಲಾಘನೀಯ. ಇಸ್ಲಾಂ ಧರ್ಮವು 1450 ವರ್ಷಗಳ ಹಿಂದೆಯೇ ಶಾಂತಿ, ಸೌಹಾರ್ದತೆ ಮತ್ತು ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸಿದೆ. ಕುರಾನ್ ಮತ್ತು ಹದೀಸ್‌ಗಳಲ್ಲಿಯೂ ಇದೇ ಮಾನವೀಯ ಸಂದೇಶವಿದೆ,” ಎಂದರು.
​ಮುಂದುವರಿದು ಮಾತನಾಡಿದ ಅವರು, “ಇಂದು ವಿಶ್ವದ ಹಲವೆಡೆ ಯುದ್ಧದ ಕಾರ್ಮೋಡಗಳು ಕವಿದಿವೆ. ಪ್ಯಾಲೆಸ್ಟೈನ್ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಅಮಾಯಕರು ಹಾಗೂ ಮಕ್ಕಳು ಬಲಿಯಾಗುತ್ತಿರುವುದು ನೋವಿನ ಸಂಗತಿ. ಈದ್ ಉಲ್ ಫಿತರ್ ಆಚರಣೆಯ ಸಂದರ್ಭದಲ್ಲಿ ಜಗತ್ತಿನಲ್ಲಿ ಶಾಂತಿ ನೆಲೆಸಲಿ ಮತ್ತು ಸಂಘರ್ಷಗಳು ಅಂತ್ಯವಾಗಲಿ ಎಂದು ಆಶಿಸೋಣ,” ಎಂದು ತಿಳಿಸಿದರು.

​ಸೌಹಾರ್ದ ಪರಂಪರೆಯ ಪುನಶ್ಚೇತನ: ಗೋಪಾಲ್ ಪೂಜಾರಿ

​ಕೋಡಿ ಚಕ್ರೇಶ್ವರಿ ದೇವಸ್ಥಾನದ ಅಧ್ಯಕ್ಷ ಗೋಪಾಲ್ ಪೂಜಾರಿ ಮಾತನಾಡಿ, “ಹಿಂದಿನ ಕಾಲದಲ್ಲಿ ನಮ್ಮ ಹಿರಿಯರ ನಡುವೆ ಇದ್ದ ಗಾಢವಾದ ಬಾಂಧವ್ಯವನ್ನು ನಾವು ಮುಂದುವರಿಸಬೇಕಿದೆ. ಧರ್ಮ ಯಾವುದಾದರೂ ಉಪವಾಸದ ಉದ್ದೇಶ ಒಂದೇ ಆಗಿರುತ್ತದೆ. ಹಿಂದೂಗಳಲ್ಲಿ ಅಯ್ಯಪ್ಪ ಮಾಲಾಧಾರಿಗಳು, ಕ್ರೈಸ್ತರಲ್ಲಿ ಗುಡ್ ಫ್ರೈಡೇ ಸಂದರ್ಭದ ಉಪವಾಸ ಹಾಗೂ ಮುಸ್ಲಿಮರ ರಂಜಾನ್ ಉಪವಾಸ – ಇವೆಲ್ಲವೂ ಸಂಯಮ ಮತ್ತು ಶಿಸ್ತನ್ನು ಕಲಿಸುತ್ತವೆ. ಇಂತಹ ಸೌಹಾರ್ದ ಕೂಟಗಳು ನಮ್ಮ ನಡುವಿನ ಬಿಕ್ಕಟ್ಟುಗಳನ್ನು ದೂರ ಮಾಡಿ ಪ್ರೀತಿಯನ್ನು ಬೆಸೆಯುತ್ತವೆ,” ಎಂದು ಅಭಿಪ್ರಾಯಪಟ್ಟರು.

​ಬಸವಣ್ಣನವರ ವಚನದಂತೆ ಬಾಳೋಣ: ಖತೀಬರ ಕರೆ:

​ಬದ್ರಿಯಾ ಮಸೀದಿಯ ಖತೀಬರು ಮಾತನಾಡಿ, “ನೆರೆಹೊರೆಯವರೊಂದಿಗೆ ಸೌಹಾರ್ದತೆಯಿಂದ ಬಾಳುವುದೇ ಇಸ್ಲಾಂ ಧರ್ಮದ ಅಡಿಪಾಯ. ಬಸವಣ್ಣನವರು ಹೇಳಿದಂತೆ, ಒಳ್ಳೆಯ ಕಾರ್ಯ ಮಾಡುವವರಿಗೆ ದೇವರು ಇಲ್ಲಿಯೇ ಪ್ರತಿಫಲ ನೀಡುತ್ತಾನೆ. ಮನುಷ್ಯರನ್ನು ಜಾತಿಯ ಹೆಸರಿನಲ್ಲಿ ಒಡೆಯುವ ಕೆಲಸ ಆಗಬಾರದು. ಶಾಂತಿ ಮತ್ತು ಸಮಾಧಾನದ ಬದುಕೇ ಈ ಇಫ್ತಾರ್ ಕೂಟದ ಮುಖ್ಯ ಉದ್ದೇಶ,” ಎಂದು ತಿಳಿಸಿ ದುವಾ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಬದ್ರಿಯಾ ಮಸೀದಿಯ ಅಧ್ಯಕ್ಷ ಅಶ್ರಫ್ ಬ್ಯಾರಿ, ಪುರಸಭೆಯ ಮಾಜಿ ಸದಸ್ಯರು, ಮೀನುಗಾರ ಸಮುದಾಯದ ಮುಖಂಡರು, ಬಿಲ್ಲವ ಹಾಗೂ ಇತರ ಹಿಂದುಳಿದ ವರ್ಗದ ಗಣ್ಯರು,
ಬದ್ರಿಯಾ ಯಂಗ್ ಮೆನ್ಸ್ ಮತ್ತು ಕೆ.ಬಿ. ಫ್ರೆಂಡ್ಸ್‌ನ ಸದಸ್ಯರು ಹಾಗೂ ಜಮಾತ್ ಬಾಂಧವರು ಉಪಸ್ಥಿತರಿದ್ದು
ಅಬ್ದುಲ್ ಕೋಡಿ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿದರು.