

ಡೈಲಿವಾರ್ತೆ:21ಮಾರ್ಚ್/2026


ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡಕ್ಕೆ ತೆರೆ..? ಇರಾನ್ ವಿರುದ್ಧದ ‘ಆಪರೇಷನ್ ಎಪಿಕ್ ಫ್ಯೂರಿ’ ಅಂತ್ಯದ ಮುನ್ಸೂಚನೆ ನೀಡಿದ ಟ್ರಂಪ್

ವಾಷಿಂಗ್ಟನ್/ದುಬೈ: ಕಳೆದ ಕೆಲವು ದಿನಗಳಿಂದ ಜಗತ್ತನ್ನೇ ಆತಂಕದ ಮುನೆಯಲ್ಲಿರಿಸಿದ್ದ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಭೀಕರ ಸಂಘರ್ಷಕ್ಕೆ ಅಂತ್ಯ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಇತ್ತೀಚಿನ ಅಧಿಕೃತ ಹೇಳಿಕೆಯು, ಇರಾನ್ ವಿರುದ್ಧ ಅಮೆರಿಕ ಹಮ್ಮಿಕೊಂಡಿದ್ದ ‘ಆಪರೇಷನ್ ಎಪಿಕ್ ಫ್ಯೂರಿ’ ಮಿಲಿಟರಿ ಕಾರ್ಯಾಚರಣೆ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ ಎಂಬ ಬಲವಾದ ಸುಳಿವು ನೀಡಿದೆ.
’ಗುರಿ ಈಡೇರಿದೆ’ ಎಂದ ಟ್ರಂಪ್: ಏನಿದು ಹೊಸ ರಣತಂತ್ರ?

ಶ್ವೇತಭವನದಿಂದ ಹೊರಬಿದ್ದಿರುವ ಅಧಿಕೃತ ಸಂದೇಶದಲ್ಲಿ ಟ್ರಂಪ್, ಕಾರ್ಯಾಚರಣೆಯ ಯಶಸ್ಸನ್ನು ಪ್ರತಿಪಾದಿಸಿದ್ದಾರೆ.
ಇರಾನ್‌ನ ಪ್ರಮುಖ ಕ್ಷಿಪಣಿ ತಾಣಗಳು, ಲಾಂಚರ್‌ಗಳು ಮತ್ತು ರಕ್ಷಣಾ ನೆಲೆಗಳನ್ನು ಅಮೆರಿಕದ ಪಡೆಗಳು ಯಶಸ್ವಿಯಾಗಿ ಧ್ವಂಸಗೊಳಿಸಿವೆ. ಇಸ್ರೇಲ್, ಸೌದಿ ಅರೇಬಿಯಾ, ಕತಾರ್ ಮತ್ತು ಯುಎಇ ರಾಷ್ಟ್ರಗಳ ಭದ್ರತೆಗಾಗಿ ರೂಪಿಸಿದ್ದ ಮಿಲಿಟರಿ ಗುರಿಗಳು ಬಹುತೇಕ ಈಡೇರಿವೆ. ಈ ಹಿನ್ನೆಲೆಯಲ್ಲಿ ಇರಾನ್ ಮೇಲಿನ ಮಿಲಿಟರಿ ಒತ್ತಡವನ್ನು ಹಂತಹಂತವಾಗಿ ಕಡಿಮೆಗೊಳಿಸಲು ಅಮೆರಿಕ ನಿರ್ಧರಿಸಿದೆ.
ಇದು ಅಮೆರಿಕದ ಜಯವೇ ಅಥವಾ ಇರಾನ್‌ನ ನೈತಿಕ ವಿಜಯವೇ?

ಅಂತರರಾಷ್ಟ್ರೀಯ ರಾಜಕೀಯ ವಿಶ್ಲೇಷಕರು ಈ ಬೆಳವಣಿಗೆಯನ್ನು ಭಿನ್ನವಾಗಿ ನೋಡುತ್ತಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್‌ನ ಪ್ರಮುಖ ಗುರಿ ಇರಾನ್‌ನಲ್ಲಿ ಆಡಳಿತ ಪತನಗೊಳಿಸುವುದಾಗಿತ್ತು. ಆದರೆ, ಭೀಕರ ದಾಳಿಯ ಹೊರತಾಗಿಯೂ ಇರಾನ್‌ನ ಇಸ್ಲಾಮಿಕ್ ಆಡಳಿತ ಅಚಲವಾಗಿದೆ.
ಇರಾನ್ ಸರ್ಕಾರವನ್ನು ಪತನಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಅಮೆರಿಕ ತನ್ನದೇ ಆದ ರೀತಿಯಲ್ಲಿ ‘ಜಯ’ ಘೋಷಿಸಿಕೊಂಡು ಯುದ್ಧದಿಂದ ಹೊರಬರಲು ದಾರಿ ಹುಡುಕುತ್ತಿದೆ ಎಂಬ ಚರ್ಚೆಗಳು ಆರಂಭವಾಗಿವೆ.
ಹೊರ್ಮುಜ್ ಜಲಸಂಧಿ: ರಕ್ಷಣೆಯ ಹೊಣೆ ಈಗ ಯಾರದ್ದು?

ವಿಶ್ವದ ಅತಿ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ಹೊರ್ಮುಜ್ ಜಲಸಂಧಿಯ ಭದ್ರತೆಯ ಬಗ್ಗೆ ಟ್ರಂಪ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. “ಇನ್ನು ಮುಂದೆ ಈ ಜಲಸಂಧಿಯನ್ನು ಬಳಸುವ ರಾಷ್ಟ್ರಗಳೇ ಅದರ ರಕ್ಷಣೆಯ ಹೊಣೆ ಹೊರಬೇಕು. ಅಮೆರಿಕ ಇದಕ್ಕೆ ಜವಾಬ್ದಾರಿಯಾಗುವುದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇರಾನ್ ಬೆದರಿಕೆ ಕಡಿಮೆಯಾದ ನಂತರ ಆಯಾ ಪ್ರಾದೇಶಿಕ ಶಕ್ತಿಗಳು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುವುದು ಸೂಕ್ತ ಎಂಬುದು ಟ್ರಂಪ್ ನಿಲುವು.
ಜಾಗತಿಕ ಪರಿಣಾಮ
ಟ್ರಂಪ್ ಅವರ ಈ ಘೋಷಣೆಯು ಅಂತರರಾಷ್ಟ್ರ ಮಟ್ಟದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಒಂದು ವೇಳೆ ಯುದ್ಧ ಸ್ಥಗಿತಗೊಂಡರೆ, ಜಾಗತಿಕ ಇಂಧನ ಮಾರುಕಟ್ಟೆ ಮತ್ತು ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳಲು ಪೂರಕವಾಗಲಿದೆ. ಆದರೆ, ಹೊರ್ಮುಜ್ ಜಲಸಂಧಿಯಿಂದ ಅಮೆರಿಕ ಹಿಂದೆ ಸರಿಯುತ್ತಿರುವುದು ಆ ಭಾಗದ ಮಿತ್ರರಾಷ್ಟ್ರಗಳಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ.