ಡೈಲಿವಾರ್ತೆ:21ಮಾರ್ಚ್/2026

​ಮೇಲಾಧಿಕಾರಿ ಕಿರುಕುಳಕ್ಕೆ ಬೇಸತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆತ್ಮಹತ್ಯೆ; ಡೆತ್‌ನೋಟ್ ವೀಡಿಯೋ ವೈರಲ್

​ತುಮಕೂರು: ಸೇವೆಯಿಂದ ನಿವೃತ್ತರಾಗಲು ಕೇವಲ ಒಂದು ವಾರ ಬಾಕಿ ಇರುವಾಗಲೇ, ಮೇಲಾಧಿಕಾರಿಗಳ ಮಾನಸಿಕ ಕಿರುಕುಳಕ್ಕೆ ಬೇಸತ್ತು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರೊಬ್ಬರು ಕಚೇರಿಯಲ್ಲೇ ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ಪಾವಗಡದಲ್ಲಿ ನಡೆದಿದೆ.

​ಪಾವಗಡ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನ್ (59) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಪಾವಗಡ ಪಟ್ಟಣದ ಆಪ್ ಬಂಡೆಯಲ್ಲಿರುವ ಕಚೇರಿಯಲ್ಲೇ ಇವರು ಅಂತಿಮ ನಿರ್ಧಾರ ತೆಗೆದುಕೊಂಡಿದ್ದಾರೆ.
​ಮಲ್ಲಿಕಾರ್ಜುನ್ ಅವರು ಸಾವನ್ನಪ್ಪುವ ಮೊದಲು ವೀಡಿಯೋವೊಂದನ್ನು ರೆಕಾರ್ಡ್ ಮಾಡಿ ತಮ್ಮ ಸಹೋದ್ಯೋಗಿಗಳಿಗೆ ರವಾನಿಸಿದ್ದಾರೆ. ಆ ವೀಡಿಯೋದಲ್ಲಿ ತಮ್ಮ ಸಾವಿಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರೇ ನೇರ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

​”ನನ್ನ ತಾಯಿ, ಹೆಂಡತಿ, ಮಕ್ಕಳು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಅವರಿಗೆ ನಾನು ಇನ್ನೂ ಹೆಚ್ಚಿನ ಸಹಾಯ ಮಾಡಬೇಕಿತ್ತು, ಆದರೆ ಜಂಟಿ ನಿರ್ದೇಶಕ ಕೃಷ್ಣಪ್ಪ ನೀಡುತ್ತಿರುವ ಕಿರುಕುಳದಿಂದಾಗಿ ನಾನು ಈ ನಿರ್ಧಾರಕ್ಕೆ ಬರುತ್ತಿದ್ದೇನೆ. ಅವರಿಗೆ ದೇವರೇ ಶಿಕ್ಷೆ ನೀಡುತ್ತಾನೆ. ನನ್ನ ಕುಟುಂಬದವರು ಯಾರೂ ಯಾರ ಮೇಲೂ ಸೇಡು ತೀರಿಸಿಕೊಳ್ಳುವ ಅಗತ್ಯವಿಲ್ಲ, ಕಾನೂನು ಮತ್ತು ದೇವರು ಅವರಿಗೆ ಶಿಕ್ಷೆ ನೀಡಲಿದ್ದಾರೆ,” ಎಂದು ವೀಡಿಯೋದಲ್ಲಿ ಮಲ್ಲಿಕಾರ್ಜುನ್ ಅಳಲು ತೋಡಿಕೊಂಡಿದ್ದಾರೆ.
​ನಿವೃತ್ತಿಗೆ ಕ್ಷಣಗಣನೆ ಇತ್ತು..

​ಮೂಲತಃ ಪಾವಗಡದ ಗುಂಡರ್ಲಾಹಳ್ಳಿ ಗ್ರಾಮದವರಾದ ಮಲ್ಲಿಕಾರ್ಜುನ್, ಕಳೆದ ಮೂರು ವರ್ಷಗಳಿಂದ ಪಾವಗಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಿಶೇಷವೆಂದರೆ, ಅವರ ಸುದೀರ್ಘ ಸೇವೆಯ ಅವಧಿ ಇನ್ನೊಂದು ವಾರದಲ್ಲಿ ಮುಕ್ತಾಯಗೊಳ್ಳುತ್ತಿತ್ತು. ಗೌರವಯುತವಾಗಿ ನಿವೃತ್ತರಾಗಬೇಕಿದ್ದ ಅಧಿಕಾರಿಯೊಬ್ಬರು ಹೀಗೆ ಕಚೇರಿಯಲ್ಲೇ ಹೆಣವಾಗಿರುವುದು ಸಹೋದ್ಯೋಗಿಗಳು ಮತ್ತು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

​ಸ್ಥಳದಲ್ಲಿ ಆಕ್ರಂದನ
​ವಿಷಯ ತಿಳಿಯುತ್ತಿದ್ದಂತೆಯೇ ಪಾವಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಚೇರಿಯ ಮುಂದೆ ಮಗನ ಶವ ಕಂಡು ಮಲ್ಲಿಕಾರ್ಜುನ್ ಅವರ ವೃದ್ಧ ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ನೆರೆದಿದ್ದವರ ಕಣ್ಣಾಲಿಗಳು ಒದ್ದೆಯಾಗಿದ್ದವು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.