ಡೈಲಿವಾರ್ತೆ:20ಮಾರ್ಚ್/2026

ಸುರ್ಗೋಳಿ: ಅಕ್ರಮ ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ: 5 ಮಂದಿ ಬಂಧನ, ಒಬ್ಬ ಪರಾರಿ!

ಶಂಕರನಾರಾಯಣ: ಅಕ್ರಮ ಜುಗಾರಿ ಚಟುವಟಿಕೆಗಳ ವಿರುದ್ಧ ಶಂಕರನಾರಾಯಣ ಪೊಲೀಸರು ನಡೆಸಿದ ದಾಳಿಯಲ್ಲಿ ಐದು ಮಂದಿಯನ್ನು ಬಂಧಿಸಿ, ಒಬ್ಬ ಆರೋಪಿಯು ಪರಾರಿಯಾಗಿರುವ ಘಟನೆ ಬೆಳ್ವೆ ಗ್ರಾಮದ ಸುರ್ಗೋಳಿ ಪ್ರದೇಶದಲ್ಲಿ ನಡೆದಿದೆ.

ಶಂಕರನಾರಾಯಣ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಅಕ್ಷಯ ಕುಮಾರಿ ಅವರ ಮಾರ್ಗದರ್ಶನದಲ್ಲಿ, ದಿನಾಂಕ 19-03-2026 ರಂದು ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆಯಿತು.

ಬೀಟ್ ಸಿಬ್ಬಂದಿಯಾದ ಜಯರಾಮ್ ನಾಯ್ಕ ಅವರು ನೀಡಿದ ಮಾಹಿತಿಯಂತೆ, ಸುರ್ಗೋಳಿಯಲ್ಲಿ ಸರ್ಕಾರಿ ಹಾಡಿ ಪ್ರದೇಶದಲ್ಲಿ ಕೆಲವರು ಅಕ್ರಮವಾಗಿ ಹಣವನ್ನು ಪಣವಾಗಿಟ್ಟು “ಅಂದರ್-ಬಾಹರ್” ಇಸ್ಪೀಟ್ ಜುಗಾರಿ ಆಟದಲ್ಲಿ ತೊಡಗಿಸಿಕೊಂಡಿದ್ದರು.
ಮಾಹಿತಿಯ ಆಧಾರದ ಮೇಲೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ, ಮರೆಯಲ್ಲಿ ನಿಂತು ಗಮನಿಸಿದಾಗ ಆರು ಜನರು ಚಾಪೆ ಹಾಸಿಕೊಂಡು ವೃತ್ತಾಕಾರದಲ್ಲಿ ಕುಳಿತು ಹಣ ಪಣವಾಗಿ ಇಟ್ಟು ಜುಗಾರಿ ಆಡುತ್ತಿರುವುದು ದೃಢಪಟ್ಟಿತು.

ತಕ್ಷಣವೇ ಪೊಲೀಸರು ದಾಳಿ ನಡೆಸಿ ಐದು ಮಂದಿಯನ್ನು ಬಂಧಿಸಿದರು.

ಬಂಧಿತರನ್ನು ಡ್ಯಾನೀಶ್ ನೊರೋನಾ (61), ರಾಘವೇಂದ್ರ ಪೂಜಾರಿ (38), ಹರೀಶ ಶೆಟ್ಟಿ (36), ಚಿರಾಗ್ ಶೆಟ್ಟಿ (34) ಮತ್ತು ಕಿರಣ ಶೆಟ್ಟಿ (39) ಎಂದು ಗುರುತಿಸಲಾಗಿದೆ. ಇನ್ನೊಬ್ಬ ಆರೋಪಿ ಪ್ರಕಾಶ್ ಪೂಜಾರಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಪೊಲೀಸರು ಆರೋಪಿಗಳಿಂದ ₹11,160 ನಗದು, 52 ಇಸ್ಪೀಟ್ ಎಲೆಗಳು, ಚಾಪೆ ಹಾಗೂ ಜುಗಾರಿ ಚಟುವಟಿಕೆಗೆ ಬಳಸಲಾಗಿದ್ದ ಮೋಟಾರು ಸೈಕಲ್ ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 18/2026ರಡಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87 ಅನ್ವಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.