

ಡೈಲಿವಾರ್ತೆ:22/ಮಾರ್ಚ್/2026


ಇಸ್ರೇಲ್‌ನ ಪರಮಾಣು ಸೌಲಭ್ಯವಿರುವ ಪಟ್ಟಣಗಳ ಮೇಲೆ ಇರಾನ್ ಭೀಕರ ಕ್ಷಿಪಣಿ ದಾಳಿ: 100ಕ್ಕೂ ಹೆಚ್ಚು ಜನರಿಗೆ ಗಾಯ

ಟೆಲ್ ಅವೀವ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತಷ್ಟು ತೀವ್ರಗೊಂಡಿದೆ. ಇಸ್ರೇಲ್‌ನ ಪ್ರಮುಖ ಪರಮಾಣು ಸೌಲಭ್ಯಗಳಿರುವ ಡಿಮೋನಾ ಮತ್ತು ಅರಾದ್ ಪಟ್ಟಣಗಳನ್ನು ಗುರಿಯಾಗಿಸಿಕೊಂಡು ಇರಾನ್ ನಡೆಸಿದ ಭೀಕರ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಭಾರೀ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ.
ನಟಾಂಜ್‌ನಲ್ಲಿರುವ ತನ್ನ ಪರಮಾಣು ತಾಣದ ಮೇಲೆ ಈ ಹಿಂದೆ ನಡೆದಿದ್ದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ಈ ಅಟ್ಯಾಕ್ ನಡೆಸಿದೆ ಎಂದು ತಿಳಿದುಬಂದಿದೆ.
ಡಿಮೋನಾದಲ್ಲಿರುವ ‘ಶಿಮೊನ್ ಪೆರೆಸ್ ನೆಗೆವ್ ಪರಮಾಣು ಸಂಶೋಧನಾ ಕೇಂದ್ರ’ವೇ ಇರಾನ್‌ನ ಪ್ರಮುಖ ಗುರಿಯಾಗಿತ್ತು.
ನೂರಾರು ಕಿಲೋಗ್ರಾಂ ತೂಕದ ಸಿಡಿತಲೆಗಳನ್ನು ಹೊಂದಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ವಸತಿ ಪ್ರದೇಶಗಳಿಗೆ ಅಪ್ಪಳಿಸಿವೆ. ಇದರಿಂದಾಗಿ ಕಟ್ಟಡಗಳ ಮುಂಭಾಗಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ ಎಂದು ಅಗ್ನಿಶಾಮಕ ದಳವನ್ನು ಉಲ್ಲೇಖಿಸಿ AFP ವರದಿ ಮಾಡಿದೆ.
ಅರಾದ್ ನಲ್ಲಿ ಸುಮಾರು 84 ಜನರು ಗಾಯಗೊಂಡಿದ್ದು, ಇವರಲ್ಲಿ 10 ಜನರ ಸ್ಥಿತಿ ಗಂಭೀರವಾಗಿದೆ.
ಡಿಮೋನಾನಲ್ಲಿ 33 ಜನರು ಗಾಯಗೊಂಡಿರುವುದು ವರದಿಯಾಗಿದೆ.
ಸ್ಥಳದಲ್ಲಿ ಭೀಕರ ಪರಿಸ್ಥಿತಿ:
ಇಸ್ರೇಲ್‌ನ ರಾಷ್ಟ್ರೀಯ ತುರ್ತು ವೈದ್ಯಕೀಯ ಸೇವಾ ಸಂಸ್ಥೆಯಾದ ‘ಮ್ಯಾಗೆನ್ ಡೇವಿಡ್ ಅಡೋಮ್’ ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಧಾವಿಸಿದೆ. ಘಟನಾ ಸ್ಥಳದಲ್ಲಿ ವ್ಯಾಪಕ ಹಾನಿ ಸಂಭವಿಸಿದ್ದು, ರಕ್ತದ ಮಡುವಿನಲ್ಲಿ ಜನ ಸಹಾಯಕ್ಕಾಗಿ ಕಿರುಚುತ್ತಿದ್ದರು ಎಂದು ಅರೆವೈದ್ಯ ಕಾರ್ಮೆಲ್ ಕೊಹೆನ್ ವಿವರಿಸಿದ್ದಾರೆ.
ಕ್ಷಿಪಣಿಗಳು ಅಪ್ಪಳಿಸಿದ ತೀವ್ರತೆಗೆ ಜನವಸತಿ ಪ್ರದೇಶಗಳಲ್ಲಿ ಸಂಪೂರ್ಣ ಅವ್ಯವಸ್ಥೆ ನಿರ್ಮಾಣವಾಗಿದೆ.