ಡೈಲಿವಾರ್ತೆ:21ಮಾರ್ಚ್/2026

ದಾವಣಗೆರೆ: ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ; 25ಕ್ಕೂ ಹೆಚ್ಚು ಮಂದಿಗೆ ಗಾಯ, ಐವರ ಸ್ಥಿತಿ ಗಂಭೀರ

​ದಾವಣಗೆರೆ: ಜಿಲ್ಲೆಯ ಆನಗೋಡು ಸಮೀಪವಿರುವ ಈದ್ಗಾ ಮೈದಾನದಲ್ಲಿ ರಂಜಾನ್ ಪ್ರಾರ್ಥನೆ ಸಲ್ಲಿಸುತ್ತಿದ್ದ ಮುಸ್ಲಿಂ ಬಾಂಧವರ ಮೇಲೆ ಹೆಜ್ಜೇನುಗಳು ಏಕಾಏಕಿ ದಾಳಿ ನಡೆಸಿದ ಭೀಕರ ಘಟನೆ ನಡೆದಿದೆ.

ಈ ಘಟನೆಯಲ್ಲಿ ಸುಮಾರು 80ಕ್ಕೂ ಅಧಿಕ ಜನರು ಜೇನು ಕಡಿತಕ್ಕೆ ಒಳಗಾಗಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಐವರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

​ಘಟನೆಯ ವಿವರ:
ಶನಿವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಸುಮಾರು 800ಕ್ಕೂ ಅಧಿಕ ಜನರು ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈ ಸಂದರ್ಭದಲ್ಲಿ ಮೈದಾನದ ಸಮೀಪವಿದ್ದ ಹೆಜ್ಜೇನು ಗೂಡಿಗೆ ಕಿಡಿಗೇಡಿ ಯುವಕರು ಕಲ್ಲು ಹೊಡೆದಿದ್ದಾರೆ ಎನ್ನಲಾಗಿದೆ. ಇದರಿಂದ ಕೆರಳಿದ ಜೇನುನೊಣಗಳು ಪ್ರಾರ್ಥನೆಯಲ್ಲಿ ತೊಡಗಿದ್ದವರ ಮೇಲೆ ಮುಗಿಬಿದ್ದಿವೆ.

ಜೇನು ದಾಳಿಯಿಂದಾಗಿ ಮೈದಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ರಕ್ಷಣೆಗಾಗಿ ದಿಕ್ಕಾಪಾಲಾಗಿ ಓಡಿದ್ದಾರೆ. ದಾಳಿಯ ತೀವ್ರತೆ ಹೆಚ್ಚಾದಾಗ ಸ್ಥಳೀಯರು ತಕ್ಷಣವೇ ಒಣ ಹುಲ್ಲಿಗೆ ಬೆಂಕಿ ಹಚ್ಚಿ, ಹೊಗೆಯ ಮೂಲಕ ಜೇನು ಹುಳಗಳನ್ನು ಓಡಿಸಲು ಪ್ರಯತ್ನಿಸಿದರು.

ಗಾಯಗೊಂಡವರನ್ನು ತಕ್ಷಣವೇ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಐವರಿಗೆ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದವರು ತುರ್ತು ಚಿಕಿತ್ಸಾ ವಿಭಾಗ ಹಾಗೂ ಸಾಮಾನ್ಯ ವಾರ್ಡ್‌ಗಳಲ್ಲಿ ದಾಖಲಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮಾಯಕೊಂಡ ಶಾಸಕ ಬಸವಂತಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿ ಚಿಕಿತ್ಸೆಗೆ ಅಗತ್ಯ ನೆರವು ನೀಡಿದ್ದಾರೆ.